ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಅಪ್ರತಿಮ ಸೇವೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ನೀಡಲಾಗುವ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ಕ್ಕೆ ಬೆಳಗಾವಿ ನಗರದ ದಕ್ಷ ಅಧಿಕಾರಿಗಳು ಭಾಜನರಾಗಿದ್ದಾರೆ. ಸುದೀರ್ಘ ಸೇವೆ, ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ತಾಂತ್ರಿಕ ಕೌಶಲ್ಯದ ಮೂಲಕ ಅಪರಾಧ ಪತ್ತೆ ಹಚ್ಚಿದ ಸಾಧಕರಿಗೆ ಈ ಗೌರವ ಸಂದಿದೆ.
ನಗರದ ಮಾರ್ಕೆಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಂತೋಷ್ ದಯಾನಂದ ಸತ್ಯನಾಯಕ ಅವರು ಈ ಬಾರಿ ಪದಕಕ್ಕೆ ಆಯ್ಕೆಯಾದ ಪ್ರಮುಖರು. 1999ರಲ್ಲಿ ಪಿಎಸ್‌ಐ ಆಗಿ ಸೇವೆ ಆರಂಭಿಸಿದ ಇವರು, ಕಳೆದ 27 ವರ್ಷಗಳಿಂದ ನಿಷ್ಠಾವಂತ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬೆಳಗಾವಿಯಂತಹ ಭಾಷಾ ಸೂಕ್ಷ್ಮ ಪ್ರದೇಶದಲ್ಲಿ ಗಣೇಶೋತ್ಸವ, ರಾಜ್ಯೋತ್ಸವ ಹಾಗೂ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಬಂದೋಬಸ್ತ್ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಅಲ್ಲದೆ, ಸುಮಾರು 47 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.
ಇನ್ನೊಂದೆಡೆ, ಬೆರಳಚ್ಚು ಘಟಕದ ಹೆಡ್ ಕಾನ್ಸ್‌ಟೇಬಲ್ ಬಾಹುಬಲಿ ಎ. ಅನಗಾಲೆ ಅವರು ಕೂಡ ಮುಖ್ಯಮಂತ್ರಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ. 1,000ಕ್ಕೂ ಹೆಚ್ಚು ಅಪರಾಧ ಸ್ಥಳಗಳಿಗೆ ಭೇಟಿ ನೀಡಿರುವ ಇವರು, ಎನ್.ಎ.ಎಫ್.ಐ.ಎಸ್ (NAFIS) ತಂತ್ರಾಂಶ ಬಳಸಿ 118ಕ್ಕೂ ಹೆಚ್ಚು ಅಂತರರಾಜ್ಯ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಇವರ ಕಾರ್ಯಕ್ಷಮತೆಯಿಂದಾಗಿ ಸುಮಾರು 5 ಕೋಟಿ ಮೌಲ್ಯದ ಕಳವು ಸ್ವತ್ತು ಮರಳಿ ವಾರಸುದಾರರಿಗೆ ಸಿಕ್ಕಿದೆ. ಅದರಲ್ಲೂ ಬುದ್ಧಿಮಾಂದ್ಯ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಇವರು ಸಂಗ್ರಹಿಸಿದ ವೈಜ್ಞಾನಿಕ ಸಾಕ್ಷ್ಯಗಳು ನಿರ್ಣಾಯಕವಾಗಿದ್ದವು. ಇವರೊಂದಿಗೆ ಡಿಎಸ್‌ಪಿ ರಾಘವೇಂದ್ರ ಹವಾಲ್ದಾರ್ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
