BELAGAVI

ಕುಡುಕರ ಅಡ್ಡೆಗಳ ಮೇಲೆ ಬೆಳಗಾವಿ ಪೊಲೀಸರ ಸರ್ಜಿಕಲ್ ಸ್ಟ್ರೈಕ್: ಕಾರನ್ನೇ ಬಾರ್ ಮಾಡಿಕೊಂಡಿದ್ದ 36 ಮಂದಿ ಅರೆಸ್ಟ್!

Share

ಬೆಳಗಾವಿ ಮಹಾನಗರದಲ್ಲಿ ಇನ್ಮುಂದೆ ರಸ್ತೆ ಪಕ್ಕ ಕಾರು ನಿಲ್ಲಿಸಿ ಪಾರ್ಟಿ ಮಾಡೋ ಪ್ಲಾನ್ ಹಾಕಿದ್ರೆ ಹುಷಾರ್! ಸಾರ್ವಜನಿಕ ಸ್ಥಳಗಳನ್ನೇ ಬಾರ್ ಮಾಡಿಕೊಂಡಿದ್ದವರ ವಿರುದ್ಧ ಬೆಳಗಾವಿ ಪೊಲೀಸರು ಸಮರ ಸಾರಿದ್ದಾರೆ. ಖುದ್ದು ಪೊಲೀಸ್ ಕಮಿಷನರ್ ಕಣಕ್ಕಿಳಿದು ಎಣ್ಣೆ ಪಾರ್ಟಿ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ ನಗರದ ರಸ್ತೆ ಬದಿಗಳಲ್ಲಿ ಹಾಗೂ ಮೈದಾನಗಳಲ್ಲಿ ಕಾರು ನಿಲ್ಲಿಸಿ ಮದ್ಯ ಸೇವಿಸುವವರ ವಿರುದ್ಧ ನಗರ ಪೊಲೀಸರು ಗದಾಪ್ರಹಾರ ಆರಂಭಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಕಾರು, ಜಮೀನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿರುವ ಪೊಲೀಸರು, ಒಟ್ಟು 24 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ನಿಯಮ ಉಲ್ಲಂಘಿಸಿ ಎಣ್ಣೆ ಪಾರ್ಟಿ ಮಾಡುತ್ತಿದ್ದ ಒಟ್ಟು 36 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ನಗರದಲ್ಲಿ ಸುಸಜ್ಜಿತ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿದ್ದರೂ ಸಹ, ಅನೇಕರು ರಸ್ತೆ ಪಕ್ಕದಲ್ಲಿ ಕಾರುಗಳನ್ನು ನಿಲ್ಲಿಸಿ ಒಳಗಡೆ ಕುಳಿತು ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ಇದು ಕೇವಲ ಸಾರ್ವಜನಿಕರಿಗೆ ಕಿರಿಕಿರಿಯಷ್ಟೇ ಅಲ್ಲದೆ, ಕುಡಿದು ವಾಹನ ಚಾಲನೆ ಮಾಡುವ ಮೂಲಕ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೋರಸೆ ಅವರು ರಾತ್ರಿ ವೇಳೆ ರಸ್ತೆ ಪಕ್ಕ ನಿಲ್ಲುವ ಕಾರುಗಳ ತಪಾಸಣೆ ನಡೆಸಲು ಖಡಕ್ ಸೂಚನೆ ನೀಡಿದ್ದಾರೆ.

ಮುಖ್ಯವಾಗಿ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಪೊಲೀಸರು ಈ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಹಠಾತ್ ತಪಾಸಣೆ ನಡೆಸಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಕಂಡುಬಂದರೆ ವಾಹನ ಜಪ್ತಿ ಮಾಡುವ ಜೊತೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಪೊಲೀಸರ ಈ ದಿಢೀರ್ ಕ್ರಮದಿಂದಾಗಿ ರಸ್ತೆ ಬದಿಯಲ್ಲಿ ಪಾರ್ಟಿ ಮಾಡುತ್ತಿದ್ದ ಕುಡುಕರಲ್ಲಿ ಈಗ ನಡುಕ ಶುರುವಾಗಿದೆ.

Tags:

error: Content is protected !!