ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆಯುವ ಕಾಲ ದೂರವಾಗಿದೆ. ಸಂಘಟನಾ ಶಕ್ತಿಯಿಂದ ಶಿಕ್ಷಕರ ಸಮಸ್ಯೆಗಳಿಗೆ ಮನೆಯಲ್ಲೇ ಪರಿಹಾರ ಸಿಗುತ್ತಿದೆ. ಬೆಳಗಾವಿಯಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ನುಗ್ಗಲಿ ಅವರು ಸಂಘಟನೆಯ ಮಹತ್ವ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಮಹತ್ವದ ಮಾತುಗಳನ್ನಾಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಮತ್ತು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ, ಬೆಳಗಾವಿ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಲಾಗಿತ್ತು.
ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ನುಗ್ಗಲಿ ಅವರು ಮಾತನಾಡಿ ಜಯಕುಮಾರ್ ಹೆಬಳಿ ಅವರು ಶಿಕ್ಷಕರು ತಮ್ಮ ಕೆಲಸ ಕಾರ್ಯಗಳಿಗಾಗಿ ನೇರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಹೋಗುವುದು ವಿರಳ. ಅವರ ಕೆಲಸಗಳನ್ನು ಹೆಚ್ಚಾಗಿ ಜಿಲ್ಲಾ ಮತ್ತು ತಾಲೂಕಾ ಸಂಘಟನೆಗಳು ಮಾಡುತ್ತವೆ. ಚುನಾವಣಾ ಕಾರ್ಯ, ಗಣತಿ ಕಾರ್ಯ, ಸೇರಿದಂತೆ ಇನ್ನುಳಿದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ನೀಗಿಸಲು ಪ್ರಯತ್ನ ಮಾಡುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ ಅವರ ನೇತೃತ್ವದಲ್ಲಿ ಕ್ರಿಯಾಶೀಲ ಸಂಘಟನೆಯಿದ್ದು, ಶಾಲೆಗಳಿಗೆ, ಶಿಕ್ಷಕರ ಮನೆಗಳಿಗೆ ಸೌಲಭ್ಯಗಳನ್ನು ತಲುಪಿಸಲು ಬೆಳಗಾವಿ ಜಿಲ್ಲಾ ಶಿಕ್ಷಕರ ಸಂಘಟನೆ ಸಕ್ರಿಯವಾಗಿ ಮಾಡುತ್ತಿದೆ. ನಿರಂತರವಾಗಿ ಬೆಳಗಾವಿಯ ಸಂಘಟನೆ ಕ್ರಿಯಾಶೀಲವಾಗಿದೆ. ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದೆ. ಸಂಘಟನೆಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯ ನೀಡಿರುವ ಸಂಘಟನೆ ಎಂದರೇ ಅದು ಬೆಳಗಾವಿಯ ಶಿಕ್ಷಕರ ಸಂಘಟನೆ. ಮಹಿಳೆಯರಿಗೆ ತಿಂಗಳಿಗೆ ಒಂದು ವಿಶೇಷ ರಜೆಯನ್ನು ನೀಡಿರುವ ಸರ್ಕಾರ ಅದು ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಎಂದರು.
ಇನ್ನು ಡಿಡಿಪಿಐ ಲೀಲಾವತಿ ಹಿರೇಮಠ ಅವರು ಈ ಜಗತ್ತಿನಲ್ಲಿ ಮಹಿಳೆಯ ಸ್ಥಾನಮಾನ ಅಮೂಲ್ಯವಾಗಿದೆ. ಪ್ರತಿ ಮಗು ಅಪ್ರತಿಮ ಮತ್ತು ವೈವಿಧ್ಯಮಯವಾಗಿರುತ್ತದೆ. ಮನುಷ್ಯನ ಅಗತ್ಯತೆಗಳು ಹೆಚ್ಚಾದಾಗ ಬೇಧಭಾವಗಳು ಹೆಚ್ಚಾದವು. ಮಹಿಳಾ ದಿನಾಚರಣೆ ಕೇವಲ ಮಾರ್ಚ್ ತಿಂಗಳಿಗೆ ಸಿಮೀತವಾಗುವುದು ಬೇಡ. ಗಾಳಿ, ಬೆಳಕು ಎಷ್ಟು ಸಹಜವೋ ಅಷ್ಟೇ ಮಹಿಳೆಯೂ ಈ ಲೋಕಕ್ಕೆ ಸಹಜ. ಮೊದಲೂ ತನ್ನನ್ನ ತಾನು ಅರಿತುಕೊಳ್ಳಬೇಕು. ಇದಕ್ಕೆ ಮೂಲವಾದ ಶಿಕ್ಷಣವನ್ನು ಎಲ್ಲರೂ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ಎಚ್ ಎಸ್, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಕಾಮನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ, ಜಗದೀಶ ಗೌಡಪ್ಪ ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ದನಗೌಡರ ಹಾಗೂ ಶಂಕ್ರಮ್ಮ ಹುಗ್ಗಿ, ಕೋಶ್ಯಾಧ್ಯಕ್ಷ ಯಲ್ಲಪ್ಪ ಪೂಜೇರ, ಸಹ ಕಾರ್ಯದರ್ಶಿಗಳಾದ ಕೆ ಎಸ್ ರಾಚಣ್ಣವರ ಮತ್ತು ಸಾವಿತ್ರಿ ತಳವಾರ ಸೇರಿದಂತೆ ಸಂಘಟನಾ ಕಾರ್ಯದರ್ಶಿಗಳಾದ ರಮೇಶ ಅಣ್ಣಿಗೇರಿ ಹಾಗೂ ಸಾವಿತ್ರಿ ಕುಜ್ಜಿ ಅವರು ಉಪಸ್ಥಿತರಿದ್ದರು.
