ಬೆಳಗಾವಿಯಲ್ಲಿ ಈ ವರ್ಷದ ಬಸವ ಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಲಿಂಗಾಯತ ಸಂಘಟನೆಗಳ ಒಕ್ಕೂಟ ಸಜ್ಜಾಗಿದೆ. ಶಿವಬಸವ ನಗರದ ಲಿಂಗಾಯತ ಭವನದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಬೃಹತ್ ಬೈಕ್ ರ್ಯಾಲಿ ಹಾಗೂ 15 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುವ ಕುರಿತು ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಏಪ್ರಿಲ್ 19ರಂದು ಮುಂಜಾನೆ 9 ಗಂಟೆಗೆ ಕಿತ್ತೂರು ಚೆನ್ನಮ್ಮ ವೃತ್ತದಿಂದ ನಗರದಾದ್ಯಂತ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗುವುದು. ಈ ವೇಳೆ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಿರುವ 15 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಮೆರವಣಿಗೆಯು ಗೋವಾವೇಸ್ವರೆಗೆ ಸಾಗಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಏಪ್ರಿಲ್ 26ರ ಭಾನುವಾರ ಸಾಯಂಕಾಲ 4 ಗಂಟೆಗೆ ರಾಣಿ ಚೆನ್ನಮ್ಮ ವೃತ್ತದಿಂದ ಮುಖ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.
ಉತ್ಸವದ ವ್ಯವಸ್ಥಿತ ನಿರ್ವಹಣೆಗಾಗಿ ಹತ್ತು ಸದಸ್ಯರ ಸಂಚಾಲಕ ಮಂಡಳಿಯನ್ನು ರಚಿಸಲಾಗಿದ್ದು, ಮುಖ್ಯ ಸಂಚಾಲಕರಾಗಿ ನ್ಯಾಯವಾದಿ ಬಸವರಾಜ್ ರೊಟ್ಟಿ ಆಯ್ಕೆಯಾಗಿದ್ದಾರೆ. ಸಹ ಸಂಚಾಲಕರುಗಳಾಗಿ ರತ್ನಪ್ರಭಾ ಬೆಲ್ಲದ, ಈರಣ್ಣ ದಯನ್ನವರ್, ಅಶೋಕ್ ಬಂಡಿಗೇರಿ, ಡಾ. ಎಸ್. ಎಂ. ದೊಡಮನಿ, ಎಸ್. ಜಿ. ಸಿದ್ನಾಳ್, ಕಿರಣ್ ಅಗಡಿ, ಮಹಾಂತೇಶ್ ಗುಡಸ್, ರಮೇಶ ತುಬಚಿ ಹಾಗೂ ಸೂರ್ಯಕಾಂತ್ ಭಾವಿ ಅವರನ್ನು ನೇಮಕ ಮಾಡಲಾಗಿದೆ. ಸಭೆಯಲ್ಲಿ ಮಾತನಾಡಿದ ಸಂಚಾಲಕ ಬಸವರಾಜ ರೊಟ್ಟಿ ಅವರು, ಬಸವ ತತ್ವದ ಅಡಿಯಲ್ಲಿ ಸಮಾಜದ ಎಲ್ಲಾ ಬಾಂಧವರು ಒಗ್ಗೂಡಿ ಈ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಸಭೆಯಲ್ಲಿ ಬೆಳಗಾವಿಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಗರಸೇವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
