ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಜನದಟ್ಟಣೆಯ ಲಾಭ ಪಡೆದು ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಮಹಿಳಾ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದೊಂದಿಗೆ ಆರೋಪಿತೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

ಬೈಲಹೊಂಗಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಹತ್ತುವಾಗ ಅವರ ಗಮನವನ್ನು ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು. ಈ ಬಗ್ಗೆ ಗಂಭೀರ ತನಿಖೆ ಕೈಗೊಂಡ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಪಿಐ ಪ್ರಮೋದ್ ಯಲಿಗಾರ ನೇತೃತ್ವದ ತಂಡ ವೈಜ್ಞಾನಿಕ ತನಿಖೆ ನಡೆಸಿ ಬೆಳಗಾವಿಯ ಗ್ಯಾಂಗ್ವಾಡಿಯ ನಿವಾಸಿ ಅನಿತಾ ನಿತೀನ್ ಚೌಗೂಲೆ (45) ಎಂಬಾಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಮಹಿಳೆಯಿಂದ ಬೈಲಹೊಂಗಲ ಪೊಲೀಸ್ ಠಾಣೆಯ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು 90 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 15,20,000 ರೂಪಾಯಿಗಳೆಂದು ಅಂದಾಜಿಸಲಾಗಿದ್ದು, ಆರೋಪಿತೆಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚುರುಕಿನ ಕಾರ್ಯಾಚರಣೆ ನಡೆಸಿ ಕಳ್ಳಿಯನ್ನು ಪತ್ತೆಹಚ್ಚಿದ ಬೈಲಹೊಂಗಲ ಪೊಲೀಸ್ ತಂಡದ ದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
