ಬಾಗಲಕೋಟೆಯಲ್ಲಿ ಈ ಬಾರಿಯ ಬಣ್ಣದ ಹಬ್ಬ ಸವಾಲುಗಳ ನಡುವೆಯೇ ಆರಂಭವಾಗಿದೆ. ಧರ್ಮ ದಂಗಲ್ ವಿವಾದದ ಕಿಚ್ಚು ಇನ್ನೂ ತಣ್ಣಗಾಗದ ಹಿನ್ನೆಲೆಯಲ್ಲಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮೊದಲ ದಿನದ ಬಣ್ಣದ ಬಂಡಿ ಮೆರವಣಿಗೆ ಅದ್ಧೂರಿಯಾಗಿ ಸಾಗಿದೆ.


ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿರುವ ಧರ್ಮ ದಂಗಲ್ ವಿವಾದದ ನಡುವೆಯೇ, ಬಾಗಲಕೋಟೆಯಲ್ಲಿ ಮೊದಲ ದಿನದ ‘ಬಣ್ಣದ ಬಂಡಿ’ ಮೆರವಣಿಗೆ ಸಂಭ್ರಮದಿಂದ ಸಾಗಿದೆ. ವಿವಾದಿತ ಪ್ರದೇಶದಿಂದಲೇ ಮೆರವಣಿಗೆ ಆರಂಭವಾಗಿದ್ದು, ನೂರಾರು ಯುವಕರು ಉತ್ಸಾಹದಿಂದ ಭಾಗಿಯಾಗಿದ್ದರು. ಮೆರವಣಿಗೆಯು ಪಂಕ ಮಸೀದಿ ಮುಂಭಾಗಕ್ಕೆ ಬರುತ್ತಿದ್ದಂತೆ ಪರಿಸ್ಥಿತಿ ತುಸು ಬಿಗುವಿನಿಂದ ಕೂಡಿತ್ತು. ಈ ವೇಳೆ ಯುವಕರು ‘ಜೈ ಶಿವಾಜಿ, ಜೈ ಭವಾನಿ’ ಎಂದು ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು, ರಂಗಿನಾಟದ ಜೋರು ಮುಗಿಲು ಮುಟ್ಟಿತ್ತು.

ಘರ್ಷಣೆಯ ಮುನ್ನೆಚ್ಚರಿಕೆಯಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಾಲಿ ಎಸ್ಪಿ ಸಿದ್ದಾರ್ಥ ಗೋಯಲ್ ಹಾಗೂ ಮಾಜಿ ಎಸ್ಪಿ ಅಮರನಾಥ ರೆಡ್ಡಿ ಅವರ ನೇತೃತ್ವದಲ್ಲಿ ಇಡೀ ನಗರವನ್ನು ಪೊಲೀಸರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಘೋಷಣೆ ಕೂಗುತ್ತಾ ಮಸೀದಿ ಮುಂದೆ ಸಾಗುತ್ತಿದ್ದ ಯುವಕರ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸದ್ಯ ಇಡೀ ನಗರ ಪೊಲೀಸ್ ಪಡೋನ್ನತಿಯಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
