ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನೀತಿ ಸಂಹಿತೆಯ ಬಿಸಿ ಜೋರಾಗಿದೆ. ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಚುನಾವಣಾ ಅಕ್ರಮ ತಡೆ ತಂಡ ಜಪ್ತಿ ಮಾಡಿದೆ.

ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 24 ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು (ಚೆಕ್ ಪೋಸ್ಟ್) ನಿರ್ಮಿಸಲಾಗಿದ್ದು, ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಚೆಕ್ ಪೋಸ್ಟ್ನಲ್ಲಿ ಆರ್.ಎಲ್. ನದಾಫ್ ನೇತೃತ್ವದ ಎಸ್.ಎಸ್.ಟಿ (SST) ತಂಡವು ವಾಹನ ತಪಾಸಣೆ ನಡೆಸುತ್ತಿದ್ದಾಗ, ಅನುಮಾನಾಸ್ಪದವಾಗಿ ಬಂದ ಕ್ರೇಟಾ ಕಾರನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ಕಾರಿನಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಕಾರು ಬೆಂಗಳೂರು, ದಾವಣಗೆರೆ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಕಲಬುರ್ಗಿ ಕಡೆಗೆ ಸಂಚರಿಸುತ್ತಿತ್ತು ಎಂದು ತಿಳಿದುಬಂದಿದೆ. ಜೈಭೀಮ ಶರಣಪ್ಪ ಎಂಬುವವರಿಗೆ ಸೇರಿದ ಈ ವಾಹನದಲ್ಲಿ ದೊಡ್ಡ ಮೊತ್ತದ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತವು ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಅಕ್ರಮ ಹಣದ ಹರಿವಿನ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದೆ.
