ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಅಥವಾ ಬಿಟಿಡಿಎ ಕಚೇರಿಯ ಮೇಲೆ ಇಂದು ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳು ಕಡತಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.


ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ಹೊಸ ಐಬಿ ಪಕ್ಕದ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (ಬಿಟಿಡಿಎ) ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ಸಂಘಟಿಸಿದ್ದಾರೆ. ಬಾಡಿಗೆದಾರರಿಗೆ ಸೈಟ್ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಲೋಕಾಯುಕ್ತ ಎಸ್ಪಿ ಮಹಾನಿಂಗ ನಂದಗಾವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ್ ರೆಡ್ಡಿ ನೇತೃತ್ವದ ತಂಡವು ಬಿಟಿಡಿಎ ಆರ್ಒ ಕಚೇರಿಗೆ ನುಗ್ಗಿ ಪರಿಶೀಲನೆ ನಡೆಸುತ್ತಿದೆ.
ಕಳೆದ ಒಂದು ಗಂಟೆಯಿಂದಲೂ ಲೋಕಾಯುಕ್ತ ಅಧಿಕಾರಿಗಳು ಬಿಟಿಡಿಎ ಕಚೇರಿಯಲ್ಲಿ ಬೀಡುಬಿಟ್ಟಿದ್ದು, ಸೈಟ್ ಹಂಚಿಕೆಗೆ ಸಂಬಂಧಿಸಿದ ಪ್ರಮುಖ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಅಕ್ರಮಕ್ಕೆ ಸಾಕ್ಷಿಯಾಗಬಲ್ಲ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಲೋಕಾಯುಕ್ತರ ಈ ದಿಢೀರ್ ದಾಳಿಯಿಂದಾಗಿ ಬಿಟಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳಲ್ಲಿ ಆತಂಕ ಮೂಡಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರ್ಯಾಚರಣೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
