Bagalkot

ಬಾಗಲಕೋಟೆ ಉಪಸಮರ: ಕೇಸರಿ ಪಡೆಯ ಶಕ್ತಿ ಪ್ರದರ್ಶನ, ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

Share

ಬಾಗಲಕೋಟೆ ಉಪಚುನಾವಣೆಯ ಕಣ ಈಗ ರಂಗೇರಿದೆ. ಬಿಜೆಪಿ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಅವರು ಇಂದು ಘಟಾನುಘಟಿ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಸಚಿವರು ಹಾಗೂ ರಾಜ್ಯದ ಪ್ರಮುಖ ನಾಯಕರ ಉಪಸ್ಥಿತಿಯು ಕ್ಷೇತ್ರದಲ್ಲಿ ಕಮಲ ಪಡೆಯ ಅಬ್ಬರಕ್ಕೆ ಸಾಕ್ಷಿಯಾಯಿತು.

ಬಾಗಲಕೋಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಇಂದು ಚುನಾವಣಾಧಿಕಾರಿ ಸಂತೋಷ್ ಜಗಲಾಸರ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಸಾಥ್ ನೀಡಿದರು. ನಾಯಕರ ದಂಡಿನೊಂದಿಗೆ ಆಗಮಿಸಿದ ಚರಂತಿಮಠ ಅವರು ವಿಜಯದ ಸಂಕಲ್ಪದೊಂದಿಗೆ ಚುನಾವಣಾ ಅಖಾಡಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ.

ನಾಮಪತ್ರ ಸಲ್ಲಿಕೆಯ ನಂತರ ಕಚೇರಿಯಿಂದ ಹೊರಬಂದ ಬಿಜೆಪಿ ನಾಯಕರು ವಿಜಯದ ಸಂಕೇತ ಪ್ರದರ್ಶಿಸಿದರು. “ಬಾಗಲಕೋಟೆಯ ಅಭಿವೃದ್ಧಿಗಾಗಿ ಮತ್ತು ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಜನರು ಚರಂತಿಮಠ ಅವರನ್ನು ಬೆಂಬಲಿಸಲಿದ್ದಾರೆ” ಎಂದು ಈ ವೇಳೆ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಪ್ರಮುಖ ನಾಯಕರು ಒಗ್ಗಟ್ಟಾಗಿ ಪ್ರಚಾರದಲ್ಲಿ ತೊಡಗಿರುವುದು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿಸಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದು ಸ್ಪಷ್ಟವಾಗಿದೆ.

Tags:

error: Content is protected !!