Bagalkot

ಬಾಗಲಕೋಟೆ ಬೈ ಎಲೆಕ್ಷನ್ ಸಮರ: ಕಾಂಗ್ರೆಸ್ ಮುಖಂಡನ ಮನೆಯಲ್ಲೇ ಶ್ರೀರಾಮುಲು ಪ್ರಚಾರ!

Share

ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ಒಂದು ವಿಚಿತ್ರ ಪ್ರಸಂಗ ನಡೆದಿದೆ. ಬಿಜೆಪಿ ಪರ ಮನೆ ಮನೆ ಪ್ರಚಾರಕ್ಕೆ ಇಳಿದಿದ್ದ ಮಾಜಿ ಸಚಿವ ಶ್ರೀರಾಮುಲು ಅವರು, ತಿಳಿಯದೇ ನೇರವಾಗಿ ಕಾಂಗ್ರೆಸ್ ಪ್ರಭಾವಿ ಮುಖಂಡರ ಮನೆಗೇ ತೆರಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಬಾಗಲಕೋಟೆ ಹಳೆ ನಗರದ ಕಿಲ್ಲಾ ಗಲ್ಲಿಯಲ್ಲಿ ಬಿಜೆಪಿ ನಾಯಕ ಶ್ರೀರಾಮುಲು ಅವರು ಇಂದು ಬಿರುಸಿನ ಮತಯಾಚನೆ ನಡೆಸುತ್ತಿದ್ದರು. ಈ ವೇಳೆ ಅವರು ಅಕಸ್ಮಾತ್ ಆಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಬಸವಪ್ರಭು ಸರನಾಡಗೌಡ ಅವರ ಮನೆಗೆ ಪ್ರವೇಶಿಸಿದರು. ಅಷ್ಟಕ್ಕೇ ನಿಲ್ಲದೆ, ಕಾಂಗ್ರೆಸ್ ನಾಯಕರ ಮನೆಯ ಆವರಣದಲ್ಲೇ ನಿಂತು ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ್ದು ನೆರೆದಿದ್ದ ಕಾರ್ಯಕರ್ತರನ್ನು ಒಂದು ಕ್ಷಣ ದಂಗಾಗಿಸಿತು.

ಈ ಎಡವಟ್ಟಿನಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಕೆಲಕಾಲ ತೀವ್ರ ಗೊಂದಲ ಉಂಟಾಯಿತು. ಮನೆ ಮನೆ ಪ್ರಚಾರದ ಭರದಲ್ಲಿ ಕಾಂಗ್ರೆಸ್ ಮುಖಂಡರ ಮನೆ ಎಂಬುದನ್ನು ಗಮನಿಸದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಉಪಚುನಾವಣೆಯ ಈ ಕಾವಿನ ನಡುವೆ, ಎದುರಾಳಿ ಪಾಳಯದ ಪ್ರಭಾವಿ ನಾಯಕನ ಮನೆಯಲ್ಲೇ ಶ್ರೀರಾಮುಲು ಅವರು ಕಾಣಿಸಿಕೊಂಡಿರುವುದು ಈಗ ಬಾಗಲಕೋಟೆ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

Tags:

error: Content is protected !!