ಬಾಗಲಕೋಟೆ ಉಪಸಮರ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಒಂದು ಕಡೆ ಅಮೀನಗಡದಲ್ಲಿ ನಾಯಕಿಯರ ಅಬ್ಬರದ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದೆಡೆ ಸಿಎಂ ಆಗಮನಕ್ಕಾಗಿ ಸುತಗುಂಡಾರ ಗ್ರಾಮದಲ್ಲಿ ಬಿಗಿ ಭದ್ರತೆಯೊಂದಿಗೆ ವೇದಿಕೆ ಸಜ್ಜಾಗಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರದ ಅಲೆ ಎದ್ದಿದೆ. ಅಮೀನಗಡ ಪಟ್ಟಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಬೃಹತ್ ಸಭೆಯಲ್ಲಿ ಕೈ ನಾಯಕಿ ವೀಣಾ ಕಾಶಪ್ಪನವರ ತಮ್ಮದೇ ಶೈಲಿಯಲ್ಲಿ ಯುವಕರನ್ನು ಉದ್ರಿಕ್ತಗೊಳಿಸುವಂತೆ ಭಾಷಣ ಮಾಡಿದರು. “ಅಂದು ಹೇಳಿದ್ದೆ, ಇಂದು ಹೇಳ್ತೀನಿ… ಮತ್ತೆ ಅಧಿಕಾರಕ್ಕೆ ಬರ್ತೀವಿ” ಎಂಬ ಅವರ ಮಾತಿಗೆ ಯುವಕರು ಸಿಳ್ಳೆ-ಕೇಕೆ ಹಾಕಿ ಸಂಭ್ರಮಿಸಿದರು. ಇದೇ ವೇಳೆ ಅಭ್ಯರ್ಥಿ ಉಮೇಶ್ ಮೇಟಿ ಅವರ ಪುತ್ರಿ ಬಾಯಕ್ಕ ಮೇಟಿ ಅವರು ತಮ್ಮ ತಂದೆಯನ್ನು ನೆನೆದು ಗ್ರಾಮಸ್ಥರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದು, ಪ್ರಚಾರದ ಕಣದಲ್ಲಿ ಭಾವನಾತ್ಮಕ ಸನ್ನಿವೇಶ ಸೃಷ್ಟಿಸಿತು.
ಇತ್ತ ಅಮೀನಗಡದ ಭಾವನಾತ್ಮಕ ಅಲೆಯ ನಡುವೆಯೇ, ಇಂದು ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಸುತಗುಂಡಾರ ಗ್ರಾಮಕ್ಕೆ ಆಗಮಿಸಿ ಮತಭೇಟೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ಸುತಗುಂಡಾರದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಡಾಗ್ ಸ್ಕ್ವಾಡ್ ಹಾಗೂ ಮೆಟಲ್ ಡಿಟೆಕ್ಟರ್ ಮೂಲಕ ವೇದಿಕೆಯ ಸುತ್ತಮುತ್ತ ತೀವ್ರ ತಪಾಸಣೆ ನಡೆಸಲಾಗಿದೆ. ಸಿಎಂಗೆ ಸಾಥ್ ನೀಡಲು ಸಚಿವರು ಹಾಗೂ ಶಾಸಕರ ದಂಡೇ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಉಮೇಶ್ ಮೇಟಿ ಪರವಾಗಿ ಅಬ್ಬರದ ಮತಯಾಚನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
