ಬಾಗಲಕೋಟೆ ಜಿಲ್ಲೆಯಲ್ಲಿ ಉಪಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 3,15,000 ರೂಪಾಯಿ ನಗದನ್ನು ವಶಪಡಿಸಿಕೊಳ್ಳುವ ಮೂಲಕ ಚುನಾವಣಾ ಅಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ.

ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಚೆಕ್‌ಪೋಸ್ಟ್‌ಗಳ ನಿಗಾ ಹೆಚ್ಚಿಸಲಾಗಿದ್ದು, 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸಲು ಸೂಕ್ತ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ. ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ್‌ನಲ್ಲಿ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ ಚನ್ನಬಸಪ್ಪ ಸಜ್ಜನ್ ಎಂಬುವವರ ಬಳಿ ಇದ್ದ 2,50,000 ರೂಪಾಯಿ ನಗದು ಪತ್ತೆಯಾಗಿದೆ. ಈ ಬೃಹತ್ ಮೊತ್ತಕ್ಕೆ ಯಾವುದೇ ಅಧಿಕೃತ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ, ಬೀಳಗಿ ಮತ್ತು ಕೋಲಾರ ನಡುವಿನ ಚೆಕ್‌ಪೋಸ್ಟ್‌ನಲ್ಲಿ ಮಹಿಂದ್ರಾ ಎಸ್‌ಯುವಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ 65,000 ರೂಪಾಯಿ ಪತ್ತೆಯಾಗಿದೆ. ಡಾ. ರಾಮಕೃಷ್ಣ ಇಂಡಿ ಎಂಬುವವರಿಗೆ ಸೇರಿದ ಈ ಹಣಕ್ಕೂ ಸೂಕ್ತ ಆಧಾರಗಳಿಲ್ಲದ ಕಾರಣ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರುತ್ತಿರುವ ಈ ಹೊತ್ತಿನಲ್ಲಿ, ಅಕ್ರಮ ಹಣದ ಹರಿವಿನ ಮೇಲೆ ಅಧಿಕಾರಿಗಳು ಕಠಿಣ ನಿಗಾ ಇರಿಸಿದ್ದಾರೆ.
