ಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಇಂದು ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ (KPS) ಭೇಟಿ ನೀಡಿದರು. ಶಾಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಿಸಿದ ಶಾಸಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಗಮನ ಸೆಳೆದರು.

ಶಾಸಕ ಆಸೀಫ್ ಸೇಠ್ ಅವರ ವಿಶೇಷ ಮನವಿಯ ಮೇರೆಗೆ ರಾಜ್ಯ ಸರ್ಕಾರವು ಬೆಳಗಾವಿ ನಗರಕ್ಕೆ ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಮಂಜೂರು ಮಾಡಿದೆ. ಈ ಪೈಕಿ ರಾಮತೀರ್ಥ ನಗರದ ಶಾಲೆಯಲ್ಲಿ ಆಧುನಿಕ ಮೂಲಸೌಕರ್ಯ ಹಾಗೂ ಸುಸಜ್ಜಿತ ತರಗತಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಂದು ಶಾಲಾ ಆವರಣಕ್ಕೆ ಭೇಟಿ ನೀಡಿದ ಶಾಸಕರು, ನಿರ್ಮಾಣ ಹಂತದಲ್ಲಿರುವ ಕೊಠಡಿಗಳು ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿದರು. ಕಾಮಗಾರಿಯು ನಿಗದಿತ ಸಮಯದೊಳಗೆ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾಮಗಾರಿ ವೀಕ್ಷಣೆಯ ನಂತರ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಶಾಸಕರು, “ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು ಎನ್ನುವುದು ನಮ್ಮ ಆಶಯ. ವಿದ್ಯಾರ್ಥಿಗಳು ಈ ಸುಧಾರಿತ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಹಾರೈಸಿದರು.

ಶಿಕ್ಷಣ ಕ್ಷೇತ್ರ ಮತ್ತು ವಿದ್ಯಾರ್ಥಿಗಳ ಕಲ್ಯಾಣವೇ ನನ್ನ ಮೊದಲ ಆದ್ಯತೆಯಾಗಿದ್ದು, ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿರಂತರ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು
