Khanapur

ಖಾನಾಪುರದ ಕವಳೆ ಮಠದ ಜಮೀನು ಅತಿಕ್ರಮಣ ಆರೋಪ: ಆಡಳಿತದ ಕ್ರಮಕ್ಕೆ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಆಗ್ರಹ

Share

ಖಾನಾಪುರದ ಕವಳೆ ಮಠದ ಮಾಲೀಕತ್ವದ ಸರ್ವೇ ಸಂಖ್ಯೆ 30, 38, 40 ಮತ್ತು 45ರ ಜಮೀನಿನ ಕುರಿತು ವಿವಾದ ಉಂಟಾಗಿದ್ದು, ಈ ಸ್ಥಳದಲ್ಲಿ ಕೆಲವರು ಅತಿಕ್ರಮಣ ಮಾಡಿರುವುದರಿಂದ ಕಾನೂನು-ಸುವ್ಯವಸ್ಥೆಯ ಸಮಸ್ಯೆ ಎದುರಾಗಿದೆ ಎಂಬ ಮಾಹಿತಿ ಹೊರಬಂದಿದೆ. ಈ ಕುರಿತು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಖಾನಾಪುರದ ಕವಳೆ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಘಟನೆಯ ಕುರಿತು ವಿವರವಾಗಿ ಮಾತನಾಡಿದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು, “ಮೇಲ್ಕಂಡ ಸರ್ವೇ ಸಂಖ್ಯೆಗಳ ಜಮೀನನ್ನು 1921ರಲ್ಲಿ ‘ದಿ ಪಯೋನಿಯರ್ ಕ್ಲೇ ಅಂಡ್ ಇಂಡಸ್ಟ್ರೀಸ್ ವರ್ಕ್ಸ್ ಲಿಮಿಟೆಡ್’ ಕಂಪನಿಗೆ ಬಾಡಿಗೆ ಆಧಾರದ ಮೇಲೆ ನೀಡಲಾಗಿತ್ತು. ಆರಂಭದಲ್ಲಿ ಈ ಕಂಪನಿಯ ಎಲ್ಲಾ ನಿರ್ದೇಶಕರು ಖಾನಾಪುರದ ನಿವಾಸಿಗಳಾಗಿದ್ದರು. ತದನಂತರ ನಾರಾಯಣ ತಿಮ್ಮಪ್ಪ ಶಾನಭಾಗ ಅವರು ಕಂಪನಿಗೆ ಸೇರಿದ ಮೇಲೆ ಹಳೆಯ ನಿರ್ದೇಶಕರು ನಿವೃತ್ತರಾದರು. ಬಳಿಕ ಕುಮಟಾದ ಶ್ರೀ ಕಾಶೀನಾಥ ಸೀತಾರಾಮ ನಾಯಕ್ ಅವರನ್ನು ಸಹ-ನಿರ್ದೇಶಕರಾಗಿ ಸೇರಿಸಿಕೊಳ್ಳಲಾಯಿತು. ಕಾಲಕ್ರಮೇಣ ಕಂಪನಿಯ ನಿಯಂತ್ರಣ ಶಾನಭಾಗ ಕುಟುಂಬದವರ ಕೈವಶವಾಯಿತು. ಪ್ರಸ್ತುತ ಪ್ರಕಾಶ ನಾರಾಯಣ ಶಾನಭಾಗ ಅವರ ವಾರಸುದಾರರಾದ ಉದಯ, ಕುಮಾರಿ ದೀಪಾ ಹಾಗೂ ಕಾಶೀನಾಥ ನಾಯಕ್ ಅವರ ಪುತ್ರ ಕಿರಣ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,” ಎಂದು ಮಾಹಿತಿ ನೀಡಿದರು.

1960ರಲ್ಲಿ ಬಾಡಿಗೆ ಅವಧಿ ಮುಗಿದ ನಂತರ ಕವಳೆ ಮಠವು ಜಮೀನು ಹಿಂದಿರುಗಿಸಲು ಕೋರಿತ್ತು. ಆದರೆ ಕಂಪನಿಯು ಜಮೀನು ನೀಡದ ಕಾರಣ ಮಠವು ನ್ಯಾಯಾಲಯದ ಮೊರೆ ಹೋಗಿತ್ತು. 1970ರಲ್ಲಿ (ದಾವೆ ಸಂಖ್ಯೆ 128/70 ಮತ್ತು 129/70) ಉಭಯ ಪಕ್ಷಗಳ ನಡುವೆ ರಾಜಿ ಸಂಧಾನ ನಡೆದು, ಬಾಡಿಗೆ ಅವಧಿಯನ್ನು ಡಿಸೆಂಬರ್ 31, 2017ರವರೆಗೆ ವಿಸ್ತರಿಸಲಾಯಿತು. ಆ ಅವಧಿಯ ನಂತರ ಜಮೀನನ್ನು ಮಠಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಅದರಂತೆ ಫೆಬ್ರವರಿ 6, 2021ರಂದು ಶ್ರೀ ಗೋಪಾಲ ಕೃಷ್ಣ ಕಾಮತ್ ಅವರು ಸಂಬಂಧಿತ ಜಮೀನುಗಳನ್ನು ಕವಳೆ ಮಠಕ್ಕೆ ಹಸ್ತಾಂತರಿಸಿದರು. ಸದ್ಯ ಮಠದ ವತಿಯಿಂದ ಈ ಜಮೀನುಗಳಲ್ಲಿ ಕೃಷಿ, ವಾಣಿಜ್ಯ ಹಾಗೂ ತೋಟಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ.

ಪ್ರಸ್ತುತ ಈ ಪ್ರಕರಣವು ಖಾನಾಪುರದ ಸಿವಿಲ್ ನ್ಯಾಯಾಲಯದಲ್ಲಿ (ಪ್ರಕರಣ ಸಂಖ್ಯೆ MA 1, MA 2 ಮತ್ತು MA 35) ಹಾಗೂ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ಬಾಕಿಯಿದೆ. ಈ ಜಮೀನಿನ ಮೇಲೆ ಯಾವುದೇ ತೃತೀಯ ಪಕ್ಷದ ಹಕ್ಕುಗಳನ್ನು ಸೃಷ್ಟಿಸಬಾರದು ಎಂದು ನ್ಯಾಯಾಲಯವು ಪ್ರತಿವಾದಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

*ಅತಿಕ್ರಮಣದ ಆರೋಪ:*
ಇಂತಹ ಸ್ಥಿತಿಯಲ್ಲೂ ಶ್ರೀ ಕಂದಿ ರವಿಕುಮಾರ್ ಎಂಬುವವರು 50 ರಿಂದ 60 ಜನರೊಂದಿಗೆ ಸರ್ವೇ ಸಂಖ್ಯೆ 40 ಮತ್ತು 45ರಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಅತಿಕ್ರಮಣ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ಅಲ್ಲಿ ಅವರು ತಮ್ಮ ಹೆಸರಿನ ಫಲಕಗಳ ಜೊತೆಗೆ ‘ಭೀಮಸೇನೆ ಅಧ್ಯಕ್ಷ, ಕರ್ನಾಟಕ ರಾಜ್ಯ’ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆ ಬಂದಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಈ ಸಂಬಂಧ ಸ್ಥಳೀಯ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದ್ದು, ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅಲ್ಲದೆ, ಕಂಪನಿಯ ನಿರ್ದೇಶಕರು ಹುಬ್ಬಳ್ಳಿಯ ಶ್ರೀ ಚೇತನ ಅಶೋಕ್ ಭರದ್ವಾಡ ಅವರಿಗೆ ಸಾಮಾನ್ಯ ಮುಖತ್ಯಾರಪತ್ರ (GPA) ನೀಡಿದ್ದು, ಅವರು ರಾಜಕೀಯ ಪ್ರಭಾವ ಬಳಸಿ ಆಡಳಿತದ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳಿಂದ ದೇಶಾದ್ಯಂತ ಇರುವ ಕವಳೆ ಮಠದ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದ್ದು, ನ್ಯಾಯಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಖಾನಾಪುರಕ್ಕೆ ಆಗಮಿಸಿ ಪ್ರತಿಭಟಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಿ, ಅತಿಕ್ರಮಣ ತೆರವುಗೊಳಿಸಿ ನ್ಯಾಯಾಲಯದ ಆದೇಶ ಜಾರಿಗೊಳಿಸಬೇಕು ಎಂಬ ಬೇಡಿಕೆ ಕೇಳಿಬಂದಿದೆ.

ಸಮಾಜದ ಮುಖಂಡರಾದ ಶರದ ಕೇಶಕಾಮತ ಮಾತನಾಡಿ, “ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಅತಿಕ್ರಮಣ ಮಾಡಿರುವುದು ಖಂಡನೀಯ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಇರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಒಗ್ಗೂಡಿ ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ,” ಎಂದರು.

*ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:*
ಈ ಸಂದರ್ಭದಲ್ಲಿ ವಕೀಲರಾದ ಪ್ರದ್ಯೂಮ್ನ ಜಿ. ಭಾಟೆ, ಪದ್ಮಾ ಹಳ್ಯಾಳಿ, ಜಯಂತ ಖಾಸನೀಸ್, ಕಿಶೋರ್ ನಾಯಕ್, ಪ್ರದೀಪ ದಲಾಲ್, ಕಿಶನ್ ಚೋದರಿ, ನಿಲೇಶ್ ಬೋರ್ಕರ್ ಹಾಗೂ ಸಸಿ ನೆಟ್ಟವರು, ಕಟ್ಟಡ ನಿರ್ಮಾಣದ ಗವಂಡಿ ಮಿಸ್ತ್ರಿಗಳು, ಫ್ಯಾಬ್ರಿಕೇಶನ್ ಕೆಲಸಗಾರರಾದ ರೋಹಿತ್ ಪಾಟೀಲ್, ಗಣೇಶ್ ಹಳ್ಯಾಳಕರ, ವಿಠ್ಠಲ್ ಸಾಳುಂಖೆ, ಚಂದ್ರಕಾಂತ್ ಸುರೋಜಿ, ಪ್ರಕಾಶ ಅಗಣೋಜಿ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!