ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ಪುದುಚೇರಿ ಉಸ್ತುವಾರಿಯಾಗಿ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಪುದುಚೇರಿಯ ರಾಜಭವನ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ ಅವರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬುವ ಮೂಲಕ ಮುಂಬರುವ ಚುನಾವಣಾ ಸಿದ್ಧತೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು.


ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ಪುದುಚೇರಿಯ ರಾಜಭವನ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನೆ ನಡೆಸಿ, ಪಕ್ಷದ ಬಲವರ್ಧನೆಗೆ ಚಾಲನೆ ನೀಡಿದರು. ಈ ವೇಳೆ ಬೂತ್ ಸಂಖ್ಯೆ 19ರ ಮಹಿಳಾ ಕಾರ್ಯಕರ್ತರನ್ನು ಖುದ್ದಾಗಿ ಭೇಟಿ ಮಾಡಿದ ಅವರು, ಸ್ಥಳೀಯರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಸ್ಮರಿಸಿದ್ದಲ್ಲದೆ, ಬಿಜೆಪಿ ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸುವ ಮೂಲಕ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸಿದರು. ಈ ಪ್ರಮುಖ ಸಭೆಯಲ್ಲಿ ಡಿಸಿಸಿ ಉಸ್ತುವಾರಿ ವೇಲ್ಮುರುಗನ್, ಡಾ. ವಿಜಯಕುಮಾರಿ, ಯುವ ಕಾಂಗ್ರೆಸ್ ಉಸ್ತುವಾರಿ ಕಪಿಲ್, ಸುರೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಪಕ್ಷದ ಸಂಘಟನಾತ್ಮಕ ಹಾದಿಯ ಬಗ್ಗೆ ಮಹತ್ವದ ಸಲಹೆಗಳನ್ನು ವಿನಿಮಯ ಮಾಡಿಕೊಂಡರು.
