BELAGAVI

ಬೆಳಗಾವಿಯಲ್ಲಿ ತಪ್ಪಿದ ಭೀಕರ ದುರಂತ: ಮಳೆ-ಗಾಳಿಗೆ ಉರುಳಿದ ಬೃಹತ್ ಟವರ್‌!

Share

ಬೆಳಗಾವಿಯಲ್ಲಿ ಸುರಿದ ಭಾರೀ ಮಳೆಗೆ ಕಾಲೇಜು ರಸ್ತೆಯ ಸರ್ದಾರ್ ಮೈದಾನದ ಬಳಿ ಬೃಹತ್ ಹೈಮಾಸ್ಟ್ ಲೈಟ್ ಟವರ್ ರಸ್ತೆಗೆ ಉರುಳಿಬಿದ್ದಿದೆ. ಸಮಯಪ್ರಜ್ಞೆ ಮೆರೆದ ಸಾಮಾಜಿಕ ಕಾರ್ಯಕರ್ತರು ಹಾಗೂ ಎಸ್‌ಡಿಆರ್‌ಎಫ್ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಂಭವನೀಯ ಭೀಕರ ಅನಾಹುತವನ್ನು ತಪ್ಪಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಸರ್ದಾರ್ ಮೈದಾನದಲ್ಲಿದ್ದ ಬೃಹತ್ ಫ್ಲಡ್‌ಲೈಟ್ ಗೋಪುರವು ಜನನಿಬಿಡ ಕಾಲೇಜು ರಸ್ತೆಗೆ ದಿಢೀರ್ ಕುಸಿದು ಬಿದ್ದಿದೆ. ಈ ಘಟನೆಯಿಂದ ರಸ್ತೆಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದಲ್ಲದೆ, ವಾಹನ ಸವಾರರು ಮತ್ತು ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಲೋಹದ ಈ ಬೃಹತ್ ಟವರ್ ರಸ್ತೆಯ ಮಧ್ಯಭಾಗದಲ್ಲೇ ಬಿದ್ದಿದ್ದರಿಂದ ಯಾವುದೇ ಕ್ಷಣದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆಯಿತ್ತು.

ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತರಾದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹುಲಿ ಮತ್ತು ಶಶಿಕಾಂತ್ ಅಂಬೇವಾಡಿಕ್ಕರ್ ಅವರು ಎಸ್‌ಡಿಆರ್‌ಎಫ್ (SDRF) ಹಾಗೂ ಸಂಚಾರಿ ಪೊಲೀಸರೊಂದಿಗೆ ಕೈಜೋಡಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ಈ ತಂಡವು ರಸ್ತೆಯಲ್ಲಿದ್ದ ಅವಶೇಷಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿತು. ಸಾರ್ವಜನಿಕರ ಜೀವ ರಕ್ಷಣೆಗಾಗಿ ಮಳೆಯಲ್ಲೂ ಹೋರಾಡಿದ ಈ ತಂಡದ ಸಮಯಪ್ರಜ್ಞೆಗೆ ಮತ್ತು ಸಾಹಸಕ್ಕೆ ಬೆಳಗಾವಿಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!