ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಇಟ್ಟಿಗಟ್ಟಿ ಸಮೀಪ ಚಲಿಸುತ್ತಿದ್ದ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಸವಾರರು ಸಮಯಪ್ರಜ್ಞೆ ಮೆರೆದು ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯವೊಂದು ತಪ್ಪಿದಂತಾಗಿದೆ.
ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಇಟ್ಟಿಗಟ್ಟಿ ಬೈಪಾಸ್ ಸಮೀಪ ತಲುಪುತ್ತಿದ್ದಂತೆ ಇಂಜಿನ್ ಭಾಗದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಕಾರಿನ ಮುಂಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸವಾರರು ತಕ್ಷಣವೇ ರಸ್ತೆ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಹೊರಬಂದಿದ್ದಾರೆ. ಇವರು ಕೆಳಗಿಳಿಯುತ್ತಿದ್ದಂತೆಯೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದ್ದು, ನೋಡುನೋಡುತ್ತಿದ್ದಂತೆಯೇ ಇಡೀ ವಾಹನ ಧಗಧಗನೆ ಹೊತ್ತಿ ಉರಿದಿದೆ. ನಟ್ಟನಡು ರಸ್ತೆಯಲ್ಲಿ ಕಾರು ಬೆಂಕಿಗಾಹುತಿಯಾಗುತ್ತಿದ್ದ ದೃಶ್ಯವನ್ನು ಕಂಡು ಹಾದಿಹೋಕರು ಹಾಗೂ ಇತರ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಈ ಭೀಕರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಾರು ಸವಾರರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಲ್ಲಿ ಈ ಘಟನೆ ಕೆಲಕಾಲ ಆತಂಕ ಮೂಡಿಸಿತ್ತು.
