Nandagad

ನಂದಗಡದಲ್ಲಿ ಧರೆಗುರುಳಿದ ಭಾರಿ ಆಲದ ಮರ: ಅರಣ್ಯಾಧಿಕಾರಿ ಮಾಧುರಿ ದಳವಾಯಿ ಅವರಿಂದ ಶ್ಲಾಘನೀಯ ಕಾರ್ಯ

Share

ಖಾನಾಪುರ ತಾಲೂಕಿನ ನಂದಗಡದಲ್ಲಿ ರಾತ್ರಿ ವೇಳೆ ಬೃಹತ್ ಆಲದ ಮರವೊಂದು ರಸ್ತೆಗೆ ಉರುಳಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಸಮಯಪ್ರಜ್ಞೆ ಮೆರೆದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಖಾನಾಪುರ ತಾಲೂಕಿನ ನಂದಗಡದ ರಾಯಪುರ ರಸ್ತೆಯಲ್ಲಿ ನಿನ್ನೆ ರಾತ್ರಿ ಬೃಹತ್ ಆಕಾರದ ಆಲದ ಮರವೊಂದು ಇದ್ದಕ್ಕಿದ್ದಂತೆ ರಸ್ತೆಯ ಮಧ್ಯೆ ಉರುಳಿ ಬಿದ್ದಿದೆ. ಈ ರಸ್ತೆಯು ಯಾವಾಗಲೂ ವಾಹನ ದಟ್ಟಣೆಯಿಂದ ಕೂಡಿರುತ್ತದೆಯಾದರೂ, ಅದೃಷ್ಟವಶಾತ್ ರಾತ್ರಿಯ ಸಮಯದಲ್ಲಿ ಮರ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬುಧವಾರ ನಂದಗಡದ ವಾರದ ಸಂತೆಯಾಗಿದ್ದರಿಂದ ಸಾವಿರಾರು ಜನರು ಓಡಾಡುವ ಈ ರಸ್ತೆಯಲ್ಲಿ, ಮರ ಬಿದ್ದ ಸಮಯದಲ್ಲಿ ಜನರು ಇಲ್ಲದಿದ್ದದ್ದು ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ.

ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ನಂದಗಡ ಉಪ ವಲಯ ಅರಣ್ಯಾಧಿಕಾರಿ ಮಾಧುರಿ ದಳವಾಯಿ ಅವರು ತಡಮಾಡದೆ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದರು. ರಾತ್ರಿಯೆನ್ನದೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮರವನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸುವ ಮೂಲಕ ಸ್ಥಗಿತಗೊಂಡಿದ್ದ ಸಂಚಾರವನ್ನು ಸುಗಮಗೊಳಿಸಿದರು. ಅರಣ್ಯ ಇಲಾಖೆಯ ಈ ತ್ವರಿತ ಸ್ಪಂದನೆಗೆ ಸ್ಥಳೀಯರು ಮತ್ತು ಪ್ರಯಾಣಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!