Khanapur

ಖಾನಾಪೂರದಲ್ಲಿ ಮರ ಬಿದ್ದು ಸವಾರನಿಗೆ ಗಾಯ: ಎಸಿಎಫ್ ಸುನೀತಾ ನಿಂಬರಗಿ ಅವರೇ, ಇನ್ನೆಷ್ಟು ಅನಾಹುತ ಸಂಭವಿಸಬೇಕು?

Share

ಖಾನಾಪೂರದಿಂದ ಜಾಂಬೋಟ್ಟಿಗೆ ಹೋಗುವ ಮುಖ್ಯ ರಸ್ತೆಯು ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಸ್ಥಳೀಯರು ಸಂಚರಿಸುವ ದಟ್ಟಣೆಯ ಹಾದಿಯಾಗಿದೆ. ಆದರೆ, ಇಂದು ಇಲ್ಲಿನ ಶನಾಯಾ ಗಾರ್ಡನ್ ಬಳಿ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಗಿಡವೊಂದು ಬಿದ್ದು ದೊಡ್ಡ ಅನಾಹುತವೇ ಸಂಭವಿಸಿದೆ. ಅಪಾಯಕಾರಿ ಮರಗಳನ್ನು ಗುರುತಿಸಿ ತೆರವುಗೊಳಿಸುವಲ್ಲಿ ಖಾನಾಪೂರ ಎಸಿಎಫ್ ಸುನೀತಾ ನಿಂಬರಗಿ ಅವರು ತೋರುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಖಾನಾಪೂರ-ಜಾಂಬೋಟ್ಟಿ ರಸ್ತೆಯ ಶನಾಯಾ ಗಾರ್ಡನ್ ಸಮೀಪ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿನಾಯಕ ಪಾಟೀಲ್ ಎಂಬ ಸವಾರನ ಮೇಲೆ ಇದ್ದಕ್ಕಿದ್ದಂತೆ ಬೃಹತ್ ಮರವೊಂದು ಬಿದ್ದಿದೆ. ಈ ಘಟನೆಯಲ್ಲಿ ವಿನಾಯಕ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ದ್ವಿಚಕ್ರ ವಾಹನವು ಸಂಪೂರ್ಣ ಜಖಂಗೊಂಡಿದೆ. ವಿನಾಯಕ ಅವರು ಬರಗಾಂವ ಮೂಲದವರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹಿಂದೆಯೂ ಹಲ್ಕರ್ಣಿ ಗ್ರಾಮದ ವ್ಯಾಪ್ತಿಯಲ್ಲಿ ಗೆದ್ದಲು ಹಿಡಿದು ಬೀಳುವ ಸ್ಥಿತಿಯಲ್ಲಿದ್ದ ಬೃಹತ್ ಮಾವಿನ ಮರದ ಕುರಿತು ‘ಇನ್ ನ್ಯೂಸ್’ ಎಚ್ಚರಿಸಿದ್ದರೂ, ಅರಣ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದ್ದರೂ ಎಸಿಎಫ್ ಸುನೀತಾ ನಿಂಬರಗಿ ಅವರು ಅಪಾಯಕಾರಿ ಮರಗಳ ತೆರವಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಖಾನಾಪೂರ ಎಸಿಎಫ್ ಆಗಿ ಕಳೆದ ಎರಡು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಸುನೀತಾ ನಿಂಬರಗಿ ಅವರು, ಕೇವಲ ಕಚೇರಿಯಲ್ಲೇ ಕುಳಿತು ಕಾಲಹರಣ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಖಾನಾಪೂರ-ಹಳಿಯಾಳ ರಸ್ತೆ ಸೇರಿದಂತೆ ತಾಲೂಕಿನ ಪ್ರಮುಖ ರಸ್ತೆಗಳ ಬದಿಯಲ್ಲಿ ಸಾವು ಹೊಂಚು ಹಾಕುತ್ತಿರುವ ಹಳೆಯ ಮರಗಳನ್ನು ಪರಿಶೀಲಿಸಿ, ಅನಾಹುತ ತಪ್ಪಿಸುವ ಕನಿಷ್ಠ ಜವಾಬ್ದಾರಿಯನ್ನು ಅವರು ಮರೆತಂತಿದೆ. ಗ್ರೌಂಡ್ ಮಟ್ಟಕ್ಕೆ ಇಳಿದು ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುವ ಬದಲು, ಸಾರ್ವಜನಿಕರ ಜೀವದ ಜೊತೆ ಆಟವಾಡಲಾಗುತ್ತಿದೆ. ಇನ್ನಾದರೂ ಸುನೀತಾ ನಿಂಬರಗಿ ಅವರು ಎಚ್ಚೆತ್ತುಕೊಳ್ಳುತ್ತಾರಾ? ಅಥವಾ ಮತ್ತೊಂದು ದೊಡ್ಡ ಅನಾಹುತಕ್ಕೆ ಕಾಯುತ್ತಿದ್ದಾರಾ? ಎಂದು ಸಾರ್ವಜನಿಕರು ನೇರವಾಗಿ ಪ್ರಶ್ನಿಸುತ್ತಿದ್ದಾರೆ.

Tags:

error: Content is protected !!