BELAGAVI

ರಾಜ್ಯಪಾಲರ ಹೆಸರಲ್ಲಿದ್ದ 6 ಎಕರೆ ಭೂಮಿ ಮಾಯ: ರಾಜ್ಯಪಾಲರ ವಜಾಕ್ಕೆ ರಾಷ್ಟ್ರಪತಿಗೆ ಮನವಿ – ಭೀಮಪ್ಪ ಗಡಾದ ಕಿಡಿ!

Share

ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಹೆಸರಿನಲ್ಲೇ ಇದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನು ಕಬಳಿಕೆಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಅಕ್ರಮವನ್ನು ತಡೆಯಲು ವಿಫಲರಾಗಿರುವ ರಾಜ್ಯಪಾಲರು ತಮ್ಮ ಸ್ಥಾನಕ್ಕೆ ಅರ್ಹರಲ್ಲ, ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ರಾಷ್ಟ್ರಪತಿಯವರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಸರ್ಕಾರದ ಪರವಾಗಿ ರಾಜ್ಯಪಾಲರ ಹೆಸರಿಗೆ ನೋಂದಣಿಯಾಗಿದ್ದ 6 ಎಕರೆ ಜಮೀನನ್ನು ಭೂಮಾಫಿಯಾ ನುಂಗಿ ಹಾಕಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 2002ರಲ್ಲಿ ಆಶ್ರಯ ಯೋಜನೆಗಾಗಿ ಖರೀದಿಸಲಾಗಿದ್ದ ಸುಮಾರು 10 ಕೋಟಿ ರೂಪಾಯಿ ಬೆಲೆಬಾಳುವ ಈ ಜಮೀನನ್ನು, ಅಂದಿನ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಸೇರಿದಂತೆ ಹಲವು ಕಂದಾಯ ಅಧಿಕಾರಿಗಳು ಸೇರಿಕೊಂಡು ನಿಯಮಬಾಹಿರವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಭೀಮಪ್ಪ ಗಡಾದ ದಾಖಲೆ ಸಮೇತ ಆರೋಪಿಸಿದ್ದಾರೆ. ಕಳೆದ 20 ವರ್ಷಗಳಿಂದ ಪಹಣಿಯಲ್ಲಿ ರಾಜ್ಯಪಾಲರ ಹೆಸರಿದ್ದರೂ, ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಆಸ್ತಿಯನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಭ್ರಷ್ಟಾಚಾರದ ಕುರಿತು ಕಳೆದ ಒಂಬತ್ತು ತಿಂಗಳುಗಳಿಂದ ಸತತವಾಗಿ ಪತ್ರ ವ್ಯವಹಾರ ನಡೆಸುತ್ತಿದ್ದರೂ ರಾಜ್ಯಪಾಲರ ಕಚೇರಿಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಗಡಾದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರಿನಲ್ಲಿರುವ ಆಸ್ತಿಯನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗದ ‘ನಿಷ್ಕ್ರಿಯ’ ರಾಜ್ಯಪಾಲರು ರಾಜ್ಯದ ಹಿತಾಸಕ್ತಿಯನ್ನು ಹೇಗೆ ಕಾಪಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ರಾಜಕೀಯ ಒತ್ತಡ ಅಥವಾ ಹಣದ ಆಮಿಷಕ್ಕೆ ಸಾಕ್ಷಿಯಾಗಿದೆ ಎಂದು ಅವರು ದೂಷಿಸಿದ್ದಾರೆ.

ಒಂದು ವಾರದೊಳಗೆ ಈ ಭೂಮಿಯನ್ನು ಮರಳಿ ಸರ್ಕಾರದ ವಶಕ್ಕೆ ಪಡೆದು, ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸದಿದ್ದರೆ ಕಾನೂನಾತ್ಮಕ ಹೋರಾಟ ತೀವ್ರಗೊಳಿಸುವುದಾಗಿ ಅವರು ಎಚ್ಚರಿಸಿದ್ದಾರೆ. ಸಂವಿಧಾನದ ಪಾಲಕರೇ ಮೌನ ವಹಿಸಿರುವುದು ಸಂವಿಧಾನದ ಘನತೆಗೆ ಚ್ಯುತಿ ತಂದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಹುದ್ದೆಯಿಂದ ವಜಾಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶೀಘ್ರವೇ ದೂರು ನೀಡುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Tags:

error: Content is protected !!