ಶಾಲೆಗೆ ರಜೆ ಬಿದ್ದ ಖುಷಿಯಲ್ಲಿ ಈಜಲು ತೆರಳಿದ್ದ ಐವರು ಬಾಲಕರಲ್ಲಿ ಇಬ್ಬರು ನೀರು ಪಾಲಾಗಿರುವ ದಾರುಣ ಘಟನೆ ಹುಕ್ಕೇರಿ ತಾಲೂಕಿನ ಹಳೆಗುಡನಟ್ಟಿ ಬಳಿ ಸಂಭವಿಸಿದೆ. ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಈಜಲು ಇಳಿದಿದ್ದಾಗ ಈ ದುರ್ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ದಾದಾಬಾನಟ್ಟಿಯ ಆರ್.ಸಿ ಸೆಂಟರ್ ಗ್ರಾಮದ ನಿವಾಸಿಗಳಾದ 14 ವರ್ಷದ ಕೃಷ್ಣಾ ವಿಠಲ ಖಾನಾಪೂರೆ ಹಾಗೂ ಪ್ರಜ್ವಲ ಗೋಕಾರ ಮೃತಪಟ್ಟ ದುರ್ದೈವಿ ಬಾಲಕರು. ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ಆರ್.ಸಿ ಸೆಂಟರ್ ಗ್ರಾಮದ ಐವರು ಸ್ನೇಹಿತರು ಸೇರಿ ಸೋಮವಾರ ಮಧ್ಯಾಹ್ನ ಹಳೇ ಗುಡನಟ್ಟಿ ಗ್ರಾಮದ ದೇವಸ್ಥಾನದ ಬಳಿಯಿರುವ ಹಿಡಕಲ್ ಜಲಾಶಯದ ಹಿನ್ನೀರಿಗೆ ಈಜಲು ತೆರಳಿದ್ದರು. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ನದಿಗೆ ಇಳಿದಿದ್ದ ಬಾಲಕರಿಗೆ ನೀರಿನ ಆಳದ ಅರಿವಿಲ್ಲದೆ ಈ ಅಪಾಯ ಸಂಭವಿಸಿದೆ ಎನ್ನಲಾಗಿದೆ.
ನದಿಗಿಳಿದಿದ್ದ ಐವರಲ್ಲಿ ಮೂವರು ಬಾಲಕರು ಹೇಗೋ ಪ್ರಾಣಾಪಾಯದಿಂದ ಪಾರಾಗಿ ದಡ ಸೇರಿದ್ದಾರೆ. ಆದರೆ, ಕೃಷ್ಣಾ ಮತ್ತು ಪ್ರಜ್ವಲ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ಹಾಗೂ ಪೋಷಕರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಜೆಯ ಮೋಜಿನಲ್ಲಿದ್ದ ಮಕ್ಕಳು ಹೀಗೆ ಹೆಣವಾಗಿ ಮರಳಿರುವುದನ್ನು ಕಂಡು ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ. ನದಿ ಮತ್ತು ಜಲಾಶಯಗಳ ಬಳಿ ತೆರಳುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಯಮಕನಮರ್ಡಿ ಸಿಪಿಐ ಜಾವಿದ್ ಮುಷಾಪುರೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
