ಬಾಗಲಕೋಟೆಯಲ್ಲಿ ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಭೇಟಿ ಭಾರೀ ಹೈಡ್ರಾಮಾಗೆ ಸಾಕ್ಷಿಯಾಯಿತು. ನಿಷೇಧಾಜ್ಞೆಯ ನಡುವೆಯೂ ಬಸವೇಶ್ವರ ವೃತ್ತಕ್ಕೆ ಭೇಟಿ ನೀಡಲು ಪಟ್ಟು ಹಿಡಿದ ಯತ್ನಾಳ್ ಅವರನ್ನು ಎಸ್ಪಿ ಸಿದ್ದಾರ್ಥ ಗೋಯಲ್ ಮನವೊಲಿಸಿ ನೇರವಾಗಿ ಆಸ್ಪತ್ರೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಬಾಗಲಕೋಟೆ ನಗರಕ್ಕೆ ಆಗಮಿಸಿದ ಶಾಸಕ ಯತ್ನಾಳ್ ಅವರನ್ನು ಸ್ವಾಗತಿಸಲು ಮತ್ತು ಭೇಟಿ ಮಾಡಲು ನೂರಾರು ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ್ದರು. ಈ ವೇಳೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಬಸವೇಶ್ವರ ವೃತ್ತಕ್ಕೆ ತೆರಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ಮುಂದಾದ ಯತ್ನಾಳ್ ಅವರನ್ನು ಖಾಸಗಿ ಆಸ್ಪತ್ರೆಯ ಬಳಿಯೇ ತಡೆದ ಎಸ್ಪಿ ಸಿದ್ದಾರ್ಥ ಗೋಯಲ್, ನಿಷೇಧಾಜ್ಞೆ ಇರುವುದರಿಂದ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಪೊಲೀಸರ ಮನವಿಗೆ ಸ್ಪಂದಿಸಿದ ಯತ್ನಾಳ್, ನಿಗದಿಪಡಿಸಿದ ಮಾರ್ಗದಲ್ಲೇ ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದರು. ಆದರೆ, ಯತ್ನಾಳ್ ಅವರ ವಾಹನವನ್ನು ನೂರಾರು ಕಾರ್ಯಕರ್ತರು ಬೈಕ್‌ಗಳ ಮೂಲಕ ಬೆಂಬಲಿಸಿ ಮೆರವಣಿಗೆಯಂತೆ ಸಾಗಿದ್ದು ವಿಶೇಷವಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಗಾಯಾಳು ಅಶೋಕ್ ಬಾರಕೇರ್ ಅವರ ಆರೋಗ್ಯ ವಿಚಾರಿಸಿ, ಅವರಿಗೆ ವೈಯಕ್ತಿಕವಾಗಿ ಧನಸಹಾಯ ಮಾಡುವ ಮೂಲಕ ಸಾಂತ್ವನ ಹೇಳಿದರು.
