ಖಾಲಿ ಹುದ್ದೆ ಭರ್ತಿ ಮಾಡಬೇಕಿದ್ದ ಸರ್ಕಾರದಿಂದ ಖಾಸಗಿ ಕೆಲಸ ಕೊಡಿಸಲು ಉದ್ಯೋಗ ಮೇಳ; ಪದವಿಧರರ ಆಕ್ಷೇಪ

ಆ್ಯಂಕರ್: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಪದವಿಧರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಕಲಿತ ವಿದ್ಯೆಗೆ ತಕ್ಕ ಉದ್ಯೋಗಾ ವಕಾಶಗಳು ಸಿಗದೆ ಅನೇಕ ಯುವಕರು ನಿರುದ್ಯೋಗಿಗಳಾಗಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ, ಉದ್ಯೋಗ ದೊರೆಯುವವರೆಗೆ ಕನಿಷ್ಠ ಜೀವನೋಪಾಯಕ್ಕೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ‘ವಿದ್ಯಾನಿಧಿ’ ಯೋಜನೆಯನ್ನು ಜಾರಿಗೆ ತಂದಿದೆ. ಇನ್ನೂ ಉದ್ಯೋಗ ಕೊಡಿಸುವ ದೃಷ್ಟಿಯಿಂದ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ಕುರಿತು ಇಲ್ಲಿದೆ ಡಿಟೇಲ್ಸ್…
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದೊಂದಿಗೆ ಹಸಿವು ಮುಕ್ತ ಹಾಗೂ ಗುಡಿಸಲು ಮುಕ್ತ ಕರ್ನಾಟಕ ನಿರ್ಮಾಣದ ಗುರಿ ಹೊಂದಿರುವ ಸರ್ಕಾರ, “ಕೌಶಲ್ಯದೊಂದಿಗೆ ಉದ್ಯೋಗದ ಕಡೆಗೆ” ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟುಕೊಂಡು ಯುವ ಸಮೃದ್ಧಿ ಸಮ್ಮೇಳನದ ಅಂಗವಾಗಿ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ. ಅದರ ಭಾಗವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಮೂಲಕ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಆವರಣದಲ್ಲಿ ಭಉದ್ಯೋಗ ಮೇಳ ಹಮ್ಮಿಕೊಳ್ಳಲಾಯಿತು. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕಲಬುರ್ಗಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ನಿರುದ್ಯೋಗಿ ಯುವಕ–ಯುವತಿಯರು ಹಾಗೂ ಪದವಿಧರರು ಈ ಉದ್ಯೋಗ ಮೇಳದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದನ್ನು ಕಾಣಬಹುದಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಶರಣಪ್ರಕಾಶ್ ಪಾಟೀಲ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೂರಾರು ಖಾಸಗಿ ಕಂಪನಿಗಳು ಕೈಜೋಡಿಸಿರುವುದನ್ನು ಉಲ್ಲೇಖಿಸಿದರು. ನಿರುದ್ಯೋಗ ನಿರ್ಮೂಲನೆಗೆ ಸರ್ಕಾರ ಗಟ್ಟಿಯಾದ ಸಂಕಲ್ಪ ತೊಟ್ಟಿದ್ದು, ಯುವಕರು ಕೌಶಲ್ಯಾಭಿವೃದ್ಧಿಯ ಮೂಲಕ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವತ್ತ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಇನ್ನೊಂದೆಡೆ, ರಾಜ್ಯದ ವಿವಿಧ ಭಾಗಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿ ವಿಜಯಪುರಕ್ಕೆ ಆಗಮಿಸಿದ ಸಾವಿರಾರು ಯುವಕ–ಯುವತಿಯರು, ಆನ್ಲೈನ್ ನೋಂದಣಿ ಮೂಲಕ ಮೇಳದಲ್ಲಿ ಪಾಲ್ಗೊಂಡಿದ್ದು, ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಭಾಗವಹಿಸಲು ಸಾಧ್ಯವಾಯಿತು. ಈ ವೇಳೆ, ರಾಜ್ಯ ಸರ್ಕಾರವು ಮೊದಲ ಆದ್ಯತೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಯುವಜನರ ಭವಿಷ್ಯ ರೂಪಿಸಬೇಕು ಎಂಬ ಬೇಡಿಕೆಗಳು ಸಹ ಕೇಳಿ ಬಂದವು.
ಒಟ್ಟಾರೆ, ವಿಜಯಪುರದ ದರ್ಬಾರ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಲಾದ ಉದ್ಯೋಗ ಮೇಳಕ್ಕೆ ನಿರೀಕ್ಷೆಗೂ ಮೀರಿ ಪದವಿಧರರು, ಐಟಿಐ, ಡಿಪ್ಲೊಮಾ ಸೇರಿದಂತೆ ವಿವಿಧ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಭಾಗವಹಿಸಿದ್ದರು. 140ಕ್ಕೂ ಅಧಿಕ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಮೇಳದಲ್ಲಿ ಹಾಜರಿದ್ದು, ಅನೇಕ ಅಭ್ಯರ್ಥಿಗಳು ಸ್ಥಳದಲ್ಲೇ ಆಯ್ಕೆಯಾಗಿ ಉದ್ಯೋಗಾವಕಾಶ ಪಡೆದುಕೊಂಡಿದ್ದು, ಮೇಳ ಯಶಸ್ವಿಯಾಗಿ ನಡೆಯಿತು.
