Bagalkot

ನಿರಾಣಿ ಸಮ್ಮುಖದಲ್ಲೇ ವಿಜಯೇಂದ್ರ ಪರೋಕ್ಷ ಟಾಂಗ್…!!!

Share

ಬಾಗಲಕೋಟೆ ರಾಜಕೀಯದಲ್ಲಿ ಈಗ ವಿಜಯೇಂದ್ರ ವರ್ಸಸ್ ನಿರಾಣಿ ಎಂಬ ಚರ್ಚೆ ಶುರುವಾಗಿದೆ. ಬಾದಾಮಿ ಕ್ಷೇತ್ರದ ಟಿಕೆಟ್ ಬಗ್ಗೆ ಮಾತನಾಡಿದ್ದ ಮುರುಗೇಶ್ ನಿರಾಣಿ ಅವರಿಗೆ, ಬಿ.ವೈ ವಿಜಯೇಂದ್ರ ಅವರು ವೇದಿಕೆ ಮೇಲೆಯೇ ಪರೋಕ್ಷವಾಗಿ ಬಿಸಿ ಮುಟ್ಟಿಸಿದ್ದಾರೆ.

ಬೀಳಗಿ ಪಟ್ಟಣದಲ್ಲಿ ನಡೆದ ‘ಜಿ ರಾಮ್ ಜಿ’ ಕಾರ್ಯಕ್ರಮವು ರಾಜಕೀಯ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಸಮ್ಮುಖದಲ್ಲೇ ಕಾರ್ಯಕರ್ತರಿಗೆ ಖಡಕ್ ಸೂಚನೆ ನೀಡಿದರು. “ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ನಮ್ಮ ಬಿಎಲ್ಒಗಳು ಮೊದಲು ತಮ್ಮ ತಮ್ಮ ಬೂತ್‌ಗಳ ಕಡೆ ಗಮನ ಹರಿಸಬೇಕು. ವಿಜಯಪುರ, ಜಮಖಂಡಿ ಅಥವಾ ಬಾಗಲಕೋಟೆಯಲ್ಲಿ ಏನಾಗುತ್ತಿದೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮೊದಲು ನಮ್ಮ ಬೂತ್‌ನಲ್ಲಿ ಮತದಾರರ ಪಟ್ಟಿ ಏನಾಗಿದೆ ಎಂಬುದನ್ನು ನೋಡಿ” ಎಂದು ಹೇಳುವ ಮೂಲಕ ನಿರಾಣಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ವಿಜಯೇಂದ್ರ ಅವರ ಈ ಹೇಳಿಕೆಯ ಹಿಂದೆ ದೊಡ್ಡದೊಂದು ರಾಜಕೀಯ ಕಾರಣವಿದೆ. ನಿನ್ನೆಯಷ್ಟೇ ಮುರುಗೇಶ್ ನಿರಾಣಿ ಅವರು ಬಾದಾಮಿ ಕ್ಷೇತ್ರದ ಟಿಕೆಟ್ ವಿಚಾರವಾಗಿ ಮಾತನಾಡುತ್ತಾ, “ಅಲ್ಲಿನ ನಾಯಕರು ಒಮ್ಮತದ ಹೆಸರು ಕೊಟ್ಟರೆ ಟಿಕೆಟ್ ತರುವುದು ಮತ್ತು ಗೆಲ್ಲಿಸುವುದು ನನ್ನ ಜವಾಬ್ದಾರಿ” ಎಂದು ಹೇಳಿಕೆ ನೀಡಿದ್ದರು. ಸ್ವಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರದ ಬಗ್ಗೆ ನಿರಾಣಿ ಆಸಕ್ತಿ ತೋರಿಸಿದ್ದಕ್ಕೆ ಅಸಮಾಧಾನಗೊಂಡಂತೆ ಕಂಡ ವಿಜಯೇಂದ್ರ, “ಬೇರೆ ಕ್ಷೇತ್ರದ ಉಸಾಬರಿ ಬೇಡ, ಸ್ವಕ್ಷೇತ್ರದ ಬೂತ್‌ಗಳನ್ನು ಗಟ್ಟಿಗೊಳಿಸಿ” ಎಂಬ ಸಂದೇಶ ರವಾನಿಸಿದ್ದಾರೆ. ಈ ‘ಬೂತ್ ಪಾಠ’ ಈಗ ಜಿಲ್ಲಾ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!