ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿನಿಂದ ಎರಡು ದಿನಗಳ ಕಾಲ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಕಾರ್ಯಕ್ರಮವನ್ನು ಆರಂಭಿಸಿರುವ ಅವರು, ಇಂದು ದಿನವಿಡೀ ವಿವಿಧ ಸಭೆ ಮತ್ತು ಜಾಗೃತಿ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.


ಬಾಗಲಕೋಟೆ ಜಿಲ್ಲಾ ಪ್ರವಾಸದ ಅಂಗವಾಗಿ ಬಿ.ವೈ. ವಿಜಯೇಂದ್ರ ಅವರು ಇಂದು ತೇರದಾಳದ ಪವಿತ್ರ ಅಲ್ಲಮಪ್ರಭು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಸಿದ್ದು ಸವದಿ ಸೇರಿದಂತೆ ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರು ಅವರಿಗೆ ಸಾಥ್ ನೀಡಿದರು. ದರ್ಶನದ ಬಳಿಕ ಮಾತನಾಡಿದ ಅವರು, ಸಂಘಟನೆ ಮತ್ತು ಭಕ್ತಿಯ ಉದ್ದೇಶದಿಂದ ಈ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದರು. ಮಧ್ಯಾಹ್ನ ತಮದಡ್ಡಿ ಗ್ರಾಮದಲ್ಲಿ ನಡೆಯಲಿರುವ ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ವಿಜಯೇಂದ್ರ ಭಾಗವಹಿಸಲಿದ್ದಾರೆ.

ಮಧ್ಯಾಹ್ನ ಬನಹಟ್ಟಿ ನಗರದಲ್ಲಿ ನೇಕಾರ ಮುಖಂಡರ ಜೊತೆ ಮಹತ್ವದ ಸಭೆ ನಡೆಸಲಿರುವ ಅವರು, ಸಂಜೆ ಈಶ್ವರಲಿಂಗ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ಜಾಗೃತಿ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ಜಮಖಂಡಿಯಲ್ಲಿ ಸಭೆ ನಡೆಸಿ ಅಲ್ಲೇ ವಾಸ್ತವ್ಯ ಹೂಡಲಿರುವ ಅವರು, ನಾಳೆ ಬೀಳಗಿ ಮತಕ್ಷೇತ್ರದಲ್ಲಿ ಪ್ರವಾಸ ಮುಂದುವರಿಸಲಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಲು ಈ ಪ್ರವಾಸವನ್ನ ವಿಜಯೇಂದ್ರ ಬಳಸಿಕೊಳ್ಳುತ್ತಿದ್ದಾರೆ.
