BELAGAVI

ಬೆಳಗಾವಿ: ರಾಯಣ್ಣನ ಪ್ರತಿಮೆಗೆ ಅಪರಿಚಿತರಿಂದ ಪದಾರ್ಥ ಲೇಪನ; ಕಿಡಿಗೇಡಿಗಳ ಪತ್ತೆಗೆ ತೀವ್ರ ಶೋಧ

Share

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಗುರುವಾರ ತಡರಾತ್ರಿ ಅಪರಿಚಿತರು ಯಾವುದೋ ಪದಾರ್ಥವನ್ನು ಹಚ್ಚಿ ವಿರೂಪಗೊಳಿಸಲು ಯತ್ನಿಸಿದ ಘಟನೆ ವರದಿಯಾಗಿದೆ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಬೆಳಗಾವಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಮೆಯ ಮೇಲೆ ಹಚ್ಚಲಾಗಿದ್ದ ನಿಗೂಢ ಪದಾರ್ಥದ ಮಾದರಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ ಫೊರೆನ್ಸಿಕ್ (FSL) ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಪ್ರತಿಮೆಯ ಸಮೀಪದಲ್ಲೇ ಅಂದರೆ ಸುಮಾರು 10 ಮೀಟರ್ ದೂರದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ಈ ಕೃತ್ಯ ಎಸಗಿದ ಕಿಡಿಗೇಡಿಗಳು ಯಾರು ಮತ್ತು ಅವರ ಉದ್ದೇಶವೇನಿತ್ತು ಎಂಬ ಬಗ್ಗೆ ಪೊಲೀಸರು ದೂರುದಾರರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಮಗ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ರಾಯಣ್ಣನ ಪ್ರತಿಮೆಗೆ ಗೌರವ ಸಲ್ಲಿಸುವ ಅಭಿಮಾನಿಗಳು ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ.

Tags:

error: Content is protected !!