ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ದೇಶಾದ್ಯಂತ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ಎಂಎಲ್ಸಿ ಪಿ.ಹೆಚ್.ಪೂಜಾರ್ ಅವರು, ಇದೊಂದು ಸರ್ವವ್ಯಾಪಿ ಮತ್ತು ಅಭಿವೃದ್ಧಿ ಪೂರಕ ಬಜೆಟ್ ಎಂದು ಬಣ್ಣಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ್, ಕೇಂದ್ರ ಬಜೆಟ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದರು. “ತೆರಿಗೆ ಸಂಗ್ರಹದ ವಿತರಣೆಯಲ್ಲಿ ಇದ್ದ ಗೊಂದಲಗಳನ್ನು ನಿವಾರಿಸಿ, ಎಲ್ಲಾ ರಾಜ್ಯಗಳಿಗೆ ಶೇ. 41ರಷ್ಟು ಪಾಲು ನೀಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರ” ಎಂದು ಅವರು ಅಭಿಪ್ರಾಯಪಟ್ಟರು. ಐಟಿ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಸೆಮಿಕಂಡಕ್ಟರ್ ಉದ್ದೇಶಕ್ಕೆ 40 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿರುವುದು ಮತ್ತು ಬಡವರಿಗೆ ಅಗ್ಗದ ದರದಲ್ಲಿ ಔಷಧಿ ಲಭ್ಯವಾಗುವಂತೆ ಮಾಡಿರುವುದು ಸರ್ಕಾರದ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದರು. ಅಲ್ಲದೆ, ಮಹಿಳೆಯರು ದಿನಸಿ ಅಂಗಡಿ ತೆರೆಯಲು ನೆರವಾಗುವ ‘ಶಿಮಾರ್ಟ್’ ಯೋಜನೆಯು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಲಿದೆ. ಒಟ್ಟಾರೆಯಾಗಿ ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’ ಮಂತ್ರದೊಂದಿಗೆ ಉತ್ಪಾದನೆ ಮತ್ತು ಕರ್ತವ್ಯಕ್ಕೆ ಮನ್ನಣೆ ನೀಡಿರುವ ಈ ಬಜೆಟ್ ದೇಶದ ಸಮಗ್ರ ಪ್ರಗತಿಗೆ ಪೂರಕವಾಗಿದೆ ಎಂದು ಪೂಜಾರ ತಿಳಿಸಿದರು.
