BELAGAVI

ಶ್ರೀಲಂಕಾದಲ್ಲಿ ಬೆಳಗಾವಿ ಪೊಲೀಸರ ಪರಾಕ್ರಮ: ‘ಐರನ್ ಮ್ಯಾನ್’ ಸಾಧಕ ಸಂಗಮೇಶ ಆನಿಗೆ ಪೊಲೀಸ್ ಆಯುಕ್ತರಿಂದ ಗೌರವ!

Share

ಅಂತರಾಷ್ಟ್ರೀಯ ಮಟ್ಟದ ಕಠಿಣ ‘ಐರನ್ ಮ್ಯಾನ್’ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಬೆಳಗಾವಿಯ ಹೆಮ್ಮೆಯ ಪೊಲೀಸ್ ಅಧಿಕಾರಿ ಆರ್.ಎಸ್.ಐ ಸಂಗಮೇಶ ಆನಿ ಅವರಿಗೆ ಇಂದು ಅದ್ಧೂರಿ ಸತ್ಕಾರ ನೀಡಲಾಯಿತು. ಪೊಲೀಸ್ ಇಲಾಖೆಯ ಬಿಡುವಿಲ್ಲದ ಕೆಲಸದ ನಡುವೆಯೂ ಇವರು ಮಾಡಿದ ಈ ಸಾಧನೆ ಈಗ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಪ್ರತಿಷ್ಠಿತ “ಅಂತರಾಷ್ಟ್ರೀಯ ಐರನ್ ಮ್ಯಾನ್ 70.3” ಸ್ಪರ್ಧೆಯಲ್ಲಿ ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್‌ನ ಸಿ.ಎ.ಆರ್ ಘಟಕದ ಆರ್.ಎಸ್.ಐ ಸಂಗಮೇಶ ಎಸ್. ಆನಿ ಅಪ್ರತಿಮ ಸಾಧನೆ ಮಾಡಿದ್ದಾರೆ. ಫೆಬ್ರವರಿ 22 ರಂದು ಸುರಿದ ಭಾರಿ ಮಳೆಯ ಸವಾಲನ್ನು ಮೆಟ್ಟಿ ನಿಂತ ಇವರು, 90 ಕಿ.ಮೀ ಸೈಕ್ಲಿಂಗ್ ಅನ್ನು 2 ಗಂಟೆ 51 ನಿಮಿಷಗಳಲ್ಲಿ ಹಾಗೂ 21 ಕಿ.ಮೀ ಓಟವನ್ನು 2 ಗಂಟೆ 05 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಒಟ್ಟು 5 ಗಂಟೆ 09 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಜಗತ್ತಿಗೆ ಸಾರಿದ್ದಾರೆ.

ಈ ಅಸಾಧಾರಣ ಸಾಧನೆಗೈದ ಸಂಗಮೇಶ ಆನಿ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಆತ್ಮೀಯವಾಗಿ ಸತ್ಕರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಡಿಸಿಪಿಗಳಾದ ನಾರಾಯಣ್ ಬರಮನಿ, ನಿರಂಜನ್ ರಾಜೇ ಅರಸ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಸಂಗಮೇಶ ಅವರ ಶಿಸ್ತು ಮತ್ತು ಕ್ರೀಡಾ ಸ್ಫೂರ್ತಿಯನ್ನು ಶ್ಲಾಘಿಸಿದರು. ಖಾಕಿ ವರದಿಯಲ್ಲಿದ್ದೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬೆಳಗಾವಿಯ ಕೀರ್ತಿ ಪತಾಕೆ ಹಾರಿಸಿದ ಇವರ ಸಾಧನೆ ರಾಜ್ಯ ಪೊಲೀಸ್ ಇಲಾಖೆಗೆ ದೊಡ್ಡ ಹೆಮ್ಮೆ ತಂದಿದೆ.

Tags:

error: Content is protected !!