Vijaypura

ಪೊಲೀಸ್ ಇನ್ಪಾರ್ಮರ್‌ನೇ ಸೂತ್ರದಾರ; ಶೋಕಿ ಜೀವನಕ್ಕೆ ಪೊಲೀಸ್ ಕನಸು ಕಂಡಿದ್ದವ ಇದೀಗ ಜೈಲು ಹಕ್ಕಿ

Share

ಅದೊಂದು ಹಾಡು ಹಗಲೇ ಪಿಸ್ತೂಲ್ ತೋರಿಸಿ ಫೈರಿಂಗ್ ಮಾಡಿ ಪರಾರಿಯಾಗಿದ್ದ ದರೋಡೆ. ಇಬ್ಬರೂ ಸೇರಿ ನಡೆಸಿದ್ದ ಕುಕೃತ್ಯ ಅದು. ಅದರಲ್ಲಿ ಒಬ್ಬ ಆರೋಪಿ ಪೊಲೀಸ್ ಆಗಬೇಕೆಂಬ ಕನಸು ಹೊತ್ತವ. ಪೊಲೀಸರ ಇನ್ಪಾರ್ಮರ್ ಆಗಿದ್ದವ ಅಷ್ಟೇ ಅಲ್ಲದೆ ನಿತ್ಯ ಬೆವರು ಸುರಿಸಿ, ನರನಾಡಿಗಳೆಲ್ಲ ಹುರಿಗೊಳಿಸಿ, ನೂರಾರು ಯುವಕರಿಗೆ ಮಾರ್ಗದರ್ಶಿಯಾಗಿದ್ದ ಶೋಕಿಲಾಲನೋರ್ವ ಐಷಾರಾಮಿ ಬದುಕಿಗಾಗಿ ಮಾಡಿದ ಸಾಲ ತೀರಿಸಲಾಗದೇ ದರೋಡೆ ಕೃತ್ಯಕ್ಕಿಳಿದ ಕುತೂಹಲಕಾರಿ ಅಂಶ ಭೀಮಾತೀರದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಇಲ್ಲಿದೆ ಒಂದು ಇಂಟ್ರೆಸ್ಟಿಂಗ್ ವರದಿ…

ವಿಜಯಪುರ ಚಡಚಣ ತಾಲೂಕಿನ ಹಲಸಂಗಿಯಲ್ಲಿ ಕಳೆದ ತಿಂಗಳು ಜ. 26 ರಂದು ಮಧ್ಯಾಹ್ನ 3.30ರ ಸುಮಾರಿಗೆ ಮಹಾರುದ್ರ ಸದಾಶಿವ ಕುಂಚಗಾರ ಎಂಬುವರ ಭೂಮಿಕಾ ಜುವೆಲರಿ ಶಾಪ್‌ನಲ್ಲಿ ನಡೆದ ದರೋಡೆ ಕೃತ್ಯ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಕಪ್ಪು ಬಣ್ಣದ ಹೋಂಡಾ ಯುನಿಕಾರ್ನ್ ಬೈಕ್ ಮೇಲೆ ಕಪ್ಪುಬಣ್ಣದ ಜಾಕೆಟ್, ಹೆಲ್ಮೆಟ್ ಧರಿಸಿ ಬಂದ ಬಂಧಿತ ಆರೋಪಿಗಳು ಅಂಗಡಿ ಮಾಲೀಕ ಮಹಾರುದ್ರನಿಗೆ ಗನ್ ತೋರಿಸಿದ್ದಾರೆ. ಆತನ ಅಂಗಡಿಯಲ್ಲಿದ್ದ 205 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ ದೋಚಿ ಪರಾರಿಯಾಗಿದ್ದರು. ಇನ್ನೂ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಭೀಮಾತೀರದ ಅನತಿ ದೂರದಲ್ಲಿರುವ ಹಲಸಂಗಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಬ್ಬರ ಪೈಕಿ ಓರ್ವನ ಜೀವನಶೈಲಿ ಅತ್ಯಂತ ಕುತೂಹಲ ದಾಯಕವಾಗಿದೆ. ಸಾಕಷ್ಟು ಓದಿಕೊಂಡು ಡೈರಿ ಕೆಲಸ ಮಾಡುತ್ತಲೇ ಪೊಲೀಸ್ ಇಲಾಖೆಯಲ್ಲಿ ಭಾತ್ಮಿದಾರನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ನೂರಾರು ಯುವಕರಿಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳುತ್ತಿದ್ದನಲ್ಲದೇ ತರಬೇತಿ ಕೂಡ ನೀಡುತ್ತಿದ್ದ. ಆದರೆ, ಶೋಕಿ ಬದುಕು ಸಮಾಜದಲ್ಲಿ ಗೌರವ, ಬದುಕಿನಲ್ಲಿ ನೆಮ್ಮದಿ ಕಸಿದುಕೊಂಡಿತು.
ಅಂದಹಾಗೆ ಆತನ ಹೆಸರು ಹಣಮಂತ ಮಲ್ಲಪ್ಪ ವಾಘೋಲಿ (28). ಮೂಲತಃ ಮಹಾರಾಷ್ಟ್ರದ ಜತ್ತ ತಾಲೂಕಿನ ಸಂಖದವನಾದ ಈತ ಪುಣೆಯ ಪಿಂಪ್ರಿಚಿಂಚವಾಡದ ಮೋರಯ್ಯ ಕಾಲನಿಯ ಲೋಂಡೆ ವಸತಿಯಲ್ಲಿ ವಾಸವಾಗಿದ್ದಾನೆ. ದರೋಡೆ ಕೃತ್ಯದಲ್ಲಿ ಈತನಿಗೆ ಸಾಥ್ ನೀಡಿದ ಇನ್ನೋರ್ವ ಆರೋಪಿ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಶಿವರಾಜ್ ಊರ್ಫ್ ಗೌಡಪ್ಪ ರಾವುಸಾಹೇಬ ನಾವಿ (28). ವೃತ್ತಿಯಲ್ಲಿ ಈತ ಚಾಲಕನಾಗಿದ್ದ.

ಇನ್ನೂ ದರೋಡೆಗೆ ಸಂಬಂಧಿಸಿದಂತೆ ಒಟ್ಟು 205 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿಯ ಆಭರಣಗಳು ಸೇರಿ 22 ಲಕ್ಷ ರೂ.ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಅಲ್ಲದೇ, ಕೃತ್ಯಕ್ಕೆ ಬಳಸಿದ 3 ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡು, ಒಂದು ಏರ್‌ಗನ್, ಹೊಂಡಾ ಕಂಪನಿಯ ಯುನಿಕಾರ್ನ್ ಮೋಟರ್ ಸೈಕಲ್, ಮಾಸ್ಕ್, ಜಾಕೇಟ್, ಹೆಲ್ಮೇಟ್, ಹ್ಯಾಂಡ್‌ಗ್ಲೌಸ್ ಹಾಗೂ ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.
ಹಲಸಂಗಿ ಕೃತ್ಯಕ್ಕೂ ಮುನ್ನ ಸೋಲಾಪುರದಲ್ಲಿ ದರೋಡೆಗೆ ಯತ್ನಿಸಿದ್ದ ಬಂಧಿತ ಆರೋಪಿಗಳು ಅಲ್ಲಿ ಜನದಟ್ಟಣೆ ಹೆಚ್ಚಿರುವ ಕಾರಣಕ್ಕೆ ವಾಪಸ್ ಆಗಿದ್ದಾರೆ. ಮಾರ್ಗಮಧ್ಯೆ ಧೂಳಖೇಡದಲ್ಲೂ ಪ್ರಯತ್ನಿಸುವ ಆಲೋಚನೆ ಇಟ್ಟುಕೊಂಡಿದ್ದರಾದರೂ ಅಲ್ಲೂ ಕಾರ್ಯಗತಗೊಂಡಿಲ್ಲ. ಕೊನೆಗೆ ಹಲಸಂಗಿಯಲ್ಲಿ ಮಧ್ಯಾಹ್ನ ಜನದಟ್ಟಣೆ ಕಡಿಮೆ ಇರುವ ಕಾರಣಕ್ಕೆ ದರೋಡೆ ನಡೆಸಿದ್ದಾರೆ. ಈ ಕೃತ್ಯಕ್ಕಾಗಿ ಗೋರಖಪುರದಿಂದ ತಂದ ಕಂಟ್ರಿ ಪಿಸ್ತೂಲ್ ಬಳಸಲಾಗಿತ್ತು

ಒಟ್ನಲ್ಲಿ ಪೊಲೀಸರ ಬಾತ್ಮಿದಾರನಾಗಿಯೂ ಪೊಲೀಸ್ ಆಗಬೇಕೆಂದು ಕನಸು ಕಂಡವ ತನ್ನ ಶೋಕಿ ಜೀವನಕ್ಕಾಗಿ ದರೋಡೆ ಮಾಡಿ ಪೊಲೀಸರ ಅತಿಥಿಯಾಗಿ ಜೈಲಿನಲ್ಲಿ ಕಂಬಿ ಎಣಿಸುವಂತೆ ಆಗಿದೆ. ಅದೇನೊ ಅಂತಾರಲ್ಲಾ ಮಾಡಿದ್ದುಣ್ಣೋ ಮಹಾರಾಯ ಎನ್ನುವ ಮಾತು ಆತನ ವಿಷಯದಲ್ಲಿ ಪಕ್ಕಾ ಅನ್ವಯವಾಗುತ್ತದೆ.

Tags:

error: Content is protected !!