ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರದಲ್ಲಿ ಇಂದು ಸಂಭ್ರಮದ ವಾತಾವರಣ ಮನೆಮಾಡಿದೆ. ಗ್ರಾಮದ ಆರಾಧ್ಯ ದೈವ ಶ್ರೀ ಲೋಕೇಶ್ವರನ ಮಹಾ ರಥೋತ್ಸವ ಸಾವಿರಾರು ಭಕ್ತರ ಜಯಘೋಷಗಳ ನಡುವೆ ಅತಿ ವಿಜೃಂಭಣೆಯಿಂದ ನೆರವೇರಿತು. ಭಕ್ತಿ ಮತ್ತು ಶ್ರದ್ಧೆಯ ಸಂಗಮಕ್ಕೆ ಸಾಕ್ಷಿಯಾದ ಈ ವೈಭವದ ಸಂಪೂರ್ಣ ಮಾಹಿತಿ ಇಲ್ಲಿದೆ.


ಲೋಕಾಪುರದ ಗ್ರಾಮದೇವತೆ ಶ್ರೀ ಲೋಕೇಶ್ವರ ದೇವಸ್ಥಾನದಿಂದ ಆರಂಭವಾದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ರಥ ಸಾಗುತ್ತಿದ್ದಂತೆ ಭಕ್ತರು “ಹರ ಹರ ಮಹಾದೇವ” ಎಂದು ಜೈಕಾರ ಹಾಕುತ್ತಾ ಭಕ್ತಿಯ ಪರಾಕಾಷ್ಠೆ ಮೆರೆದರು. ಗ್ರಾಮದ ಹಿರಿಯರು ಮತ್ತು ಯುವಕರು ಅತ್ಯಂತ ಉತ್ಸಾಹದಿಂದ ರಥದ ಹಗ್ಗ ಎಳೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಹೆದ್ದಾರಿಯ ಎರಡೂ ಬದಿಗಳಲ್ಲಿ ಜಮಾಯಿಸಿದ್ದ ಮಹಿಳೆಯರು ಮತ್ತು ಮಕ್ಕಳು ಲೋಕೇಶ್ವರನ ದರ್ಶನ ಪಡೆದು ಪುನೀತರಾದರು.
ರಥವು ಸಾಗುವ ಹಾದಿಯಲ್ಲಿ ಭಕ್ತರು ಹರಕೆಯ ರೂಪದಲ್ಲಿ ಉತ್ತತ್ತಿ, ಬಾಳೆಹಣ್ಣು ಮತ್ತು ಹೂಗಳನ್ನು ರಥದ ಮೇಲೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಸ್ಥಾನದಿಂದ ಹೊರಟ ಮಹಾರಥವು ಬಸ್ ನಿಲ್ದಾಣದ ಹತ್ತಿರವಿರುವ ರಾಮಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ, ಬಳಿಕ ಮರಳಿ ದೇವಸ್ಥಾನದ ಆವರಣಕ್ಕೆ ತಲುಪುತ್ತಿದ್ದಂತೆಯೇ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.
ಲೋಕಾಪುರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ಈ ವೈಭವದ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
