Belagavi

ಬೆಳಗಾವಿಯಲ್ಲಿ ಅಧ್ಯಾತ್ಮದ ಕಂಪು: ಸದಾಶಿವನಗರದಲ್ಲಿ ‘ಯೋಗದಾ ಸತ್ಸಂಗ’ದ ಭವ್ಯ ಧ್ಯಾನ ಮಂದಿರ ಲೋಕಾರ್ಪಣೆ

Share

ಕುಂದಾನಗರಿ ಬೆಳಗಾವಿಯಲ್ಲಿಂದು. ಪರಮಹಂಸ ಯೋಗಾನಂದರ ದಿವ್ಯ ಸಂದೇಶಗಳನ್ನು ಸಾರುವ ‘ಯೋಗದಾ ಸತ್ಸಂಗ’ದ ಹೊಸ ಧ್ಯಾನ ಮಂದಿರವು ಸದಾಶಿವನಗರದಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿದೆ.

 

ಬೆಳಗಾವಿಯ ಸದಾಶಿವನಗರದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಧ್ಯಾನ ಮಂದಿರವನ್ನು ರಾಂಚಿ ಆಶ್ರಮದ ಸ್ವಾಮಿ ಶ್ರದ್ಧಾನಂದಜೀ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪರಮಹಂಸ ಯೋಗಾನಂದರ ಭಾವಚಿತ್ರದೊಂದಿಗೆ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಯವರು, ‘ಒಬ್ಬ ಯೋಗಿಯ ಆತ್ಮಕಥೆ’ ಕೃತಿಯು ಕೇವಲ ಪುಸ್ತಕವಲ್ಲ, ಅದು ಜೀವನದ ದರ್ಶನವಾಗಿದೆ. ವೈಜ್ಞಾನಿಕ ಧ್ಯಾನ ತಂತ್ರಗಳ ಮೂಲಕ ಮನುಷ್ಯನು ಮಾನಸಿಕ ಶಾಂತಿ ಮತ್ತು ಏಕಾಗ್ರತೆಯನ್ನು ಸಾಧಿಸಲು ಸಾಧ್ಯ ಎಂದು ಮಾರ್ಗದರ್ಶನ ನೀಡಿದರು.

ಮೂರು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಸಮಾರಂಭದಲ್ಲಿ ಕ್ರಿಯಾಯೋಗ ದೀಕ್ಷೆ ಮತ್ತು ಧ್ಯಾನ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಮಂದಿರದ ನಿರ್ಮಾಣಕ್ಕೆ ನೆರವು ನೀಡಿದ ಶಶಿಕಾಂತ್ ಚುನಮರಿ ದಂಪತಿಗಳು ಹಾಗೂ ಬಿಲ್ಡರ್ ವೀರೇಶ್ ಅವರನ್ನು ಈ ವೇಳೆ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಮಿ ಧೈರ್ಯಾನಂದಜಿ, ಸ್ವಾಮಿ ಶ್ರೇಯಾನಂದಜಿ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು, ಅಧ್ಯಾತ್ಮಿಕ ಚಿಂತನೆಗಳಲ್ಲಿ ಪಾಲ್ಗೊಂಡರು. ಸಮೂಹ ಧ್ಯಾನದ ಮಹತ್ವವನ್ನು ಸಾರಿದ ಈ ಕಾರ್ಯಕ್ರಮವು ಭಕ್ತರಲ್ಲಿ ಹೊಸ ಚೈತನ್ಯವನ್ನು ತುಂಬಿತು.

Tags:

error: Content is protected !!