ಬಾಗಲಕೋಟೆಯಲ್ಲಿ ಶಿವಜಯಂತಿ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪಂಕಾ ಮಸೀದಿ ಬಳಿ ನಡೆದ ಕಲ್ಲು ತೂರಾಟದಲ್ಲಿ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಗಾಯಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಘಟನೆಯ ಬೆನ್ನಲ್ಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಸಾರ್ವಜನಿಕ ಶಾಂತಿ ಕಾಪಾಡಲು ನಗರದಾದ್ಯಂತ 163ನೇ ಕಲಂ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಹಳೆ ಬಾಗಲಕೋಟೆಯ ಪಂಕಾ ಮಸೀದಿ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆ ಸಾಗುತ್ತಿದ್ದಾಗ ಮಸೀದಿಯಲ್ಲಿದ್ದ ಯುವಕರ ಗುಂಪಿನಿಂದ ಕಲ್ಲು ಮತ್ತು ಚಪ್ಪಲಿ ತೂರಿಬಂದಿದ್ದು, ಘಟನೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಹಾಗೂ ಇಬ್ಬರು ಪೊಲೀಸರು ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಡಿಜೆ ಹಾಡಿಗೆ ಯುವಕರು ಕುಣಿಯುತ್ತಿದ್ದ ವೇಳೆ ತನ್ವೀರ್ ಶಕೀಲ್ ಹವಾಲ್ದಾರ್ ಎಂಬಾತ ಶೂ ರ್ಯಾಕ್ನಲ್ಲಿದ್ದ ಕಲ್ಲುಗಳನ್ನು ಎಸೆದಿದ್ದು, ಸಂಪೂರ್ಣ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎ೧ ಆರೋಪಿ ತನ್ವೀರ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇನ್ನುಳಿದಂತೆ ಮುಜ್ಜು ಕಮತಗಿ, ಸದ್ದಾಂ, ಪಯಾಜ್ ಸೇರಿದಂತೆ ಏಳು ಜನರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಘಟನೆಯ ನಂತರ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಾಗಲಕೋಟೆ, ನವನಗರ ಮತ್ತು ವಿದ್ಯಾಗಿರಿ ಪ್ರದೇಶಗಳಲ್ಲಿ ಫೆಬ್ರವರಿ 24ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು ಪ್ರತಿಕ್ರಿಯಿಸಿರುವ ಸಚಿವ ತಿಮ್ಮಾಪೂರ ಅವರು, ಸಮಾಜದಲ್ಲಿ ಶಾಂತಿ ಕದಡುವ ಅಥವಾ ಯಾರಿಗೂ ನೋವುಂಟು ಮಾಡುವ ಕೆಲಸ ಆಗಬಾರದು ಎನ್ನುವುದು ಸರ್ಕಾರದ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದರು. ಮಸೀದಿಯಿಂದ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಂಧಿಸಲಾಗಿದ್ದು, ಗಲಭೆಯ ಸಂಪೂರ್ಣ ವಿವರಗಳನ್ನು ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲಾಡಳಿತವು ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತವಾಗಿದೆ ಎಂದರು. ಇದೇ ವೇಳೆ, ಕಾನೂನು ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ ಸಚಿವರು, ರಾಜಕೀಯ ಲಾಭಕ್ಕಾಗಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿ ವಾತಾವರಣ ಕೆಡಿಸಬಾರದೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಸಂಗಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ದೇವಸ್ಥಾನದ ಮುಂದೆ ಜಮಾಯಿಸಿದ್ದ ಹಿಂದೂ ಕಾರ್ಯಕರ್ತರನ್ನು ಮನವೊಲಿಸಿ ಮನೆಗೆ ಕಳುಹಿಸಿದರು. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸ್ಥಳದಲ್ಲಿಯೇ ಎಸ್ಪಿ ಮತ್ತು ಐಜಿಪಿ ಅವರು ಮೊಕ್ಕಾಂ ಹೂಡಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ ಅವರು, ಸಂಜೆ 5 ಗಂಟೆಗೆ ಉಭಯ ಕೋಮುಗಳ ಮುಖಂಡರ ಶಾಂತಿ ಸಭೆಯನ್ನು ಕರೆದಿದ್ದು, ಸೌಹಾರ್ದತೆ ಕಾಪಾಡಲು ಸಹಕರಿಸುವಂತೆ ಕೋರಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕಲ್ಲು ತೂರಾಟ ನಡೆದ ಹಿನ್ನೆಲೆಯ ಬಗ್ಗೆ ಪ್ರಶ್ನಿಸಿದ ಅವರು, ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈಗಾಗಲೇ ಹಿಂದೂ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಲಾಗಿದ್ದು, ಸ್ಥಗಿತಗೊಂಡಿದ್ದ ಮೆರವಣಿಗೆಯನ್ನು ಮರಳಿ ನಡೆಸುವಂತೆ ಹಲವರು ಸಲಹೆ ನೀಡುತ್ತಿದ್ದಾರೆ ಎಂದು ತಿಳಿಸಿದ ಭಾಂಡಗೆ ಅವರು, ಈ ಕುರಿತು ಎಲ್ಲಾ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಾಗಲಕೋಟೆ ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಸೆಕ್ಷನ್ 163ರ ಅಡಿ ಈ ಆದೇಶ ಹೊರಡಿಸಿದ್ದು, ಸಾರ್ವಜನಿಕವಾಗಿ ನಾಲ್ಕಕ್ಕಿಂತ ಹೆಚ್ಚು ಜನ ಸೇರುವುದನ್ನು ನಿಷೇಧಿಸಿದ್ದಾರೆ. ಇಂದು ಬೆಳಿಗ್ಗೆ ನೂರಾರು ಹಿಂದೂ ಕಾರ್ಯಕರ್ತರು ಸಭೆ ಸೇರಿ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಾಳೆ ಎಸ್ಪಿ ಹಾಗೂ ಐಜಿಪಿಯವರಿಗೆ ಅಧಿಕೃತ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಸದ್ಯ ಕಿಲ್ಲಾ ಗಲ್ಲಿಯ ಸುತ್ತಮುತ್ತ ಬಿಗಿ ಬಂದೋಬಸ್ತ್ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
