ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಸರಣಿ ಆರಂಭವಾಗಿದೆ. ಬೆಳಗಾವಿಯ ಮಹಾಂತಭಾವನ ಭವನದಲ್ಲಿ ನಡೆಯುತ್ತಿರುವ ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.



ಫೆಬ್ರವರಿ 25 ರಿಂದ ಮಾರ್ಚ್ 1 ರವರೆಗೆ ನಡೆಯಲಿರುವ ಶ್ರೀ ರೇಣುಕಾಚಾರ್ಯ ಜಯಂತ್ಯೋತ್ಸವಕ್ಕೆ ಚಾಲನೆ ದೊರೆತಿದ್ದು, ಭಕ್ತರಲ್ಲಿ ಸಡಗರ ಮನೆಮಾಡಿದೆ. ಹೊನ್ನೇಹಾಳ ಬೃಹನ್ ಮಠದ ಶ್ರೀ ಬಸವರಾಜ ದೇವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ರೇಣುಕಾಚಾರ್ಯರ ಜೀವನ ಚರಿತ್ರೆಯ ಕುರಿತು ವಿಶೇಷ ಪ್ರವಚನ ನೀಡುತ್ತಿದ್ದಾರೆ. ಶನಿವಾರದವರೆಗೆ ನಡೆಯಲಿರುವ ಈ ಪ್ರವಚನದಲ್ಲಿ ಮಹಾಪುರುಷರ ತತ್ವಗಳು ಹಾಗೂ ಲೋಕ ಕಲ್ಯಾಣಕ್ಕಾಗಿ ಅವರು ನೀಡಿದ ಸಂದೇಶಗಳನ್ನು ಭಕ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.


ಇದೇ ಸಂದರ್ಭದಲ್ಲಿ ಮಹಾಲಕ್ಷ್ಮಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಠಣ ಕಾರ್ಯಕ್ರಮ ಅತ್ಯಂತ ಭಕ್ತಿಪೂರ್ವಕವಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಲಕ್ಷ್ಮಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ನಂದ ಲೋಕಣ್ಣನವರು ವಹಿಸಿದ್ದರು. ಕಾರಂಜಿ ಮಠದ ಶ್ರೀಗಳ ಪ್ರವಚನದೊಂದಿಗೆ ಆರಂಭವಾದ ಈ ಧಾರ್ಮಿಕ ಸಭೆಯು ಆಧ್ಯಾತ್ಮಿಕ ಚಿಂತನೆಗಳಿಗೆ ಸಾಕ್ಷಿಯಾಯಿತು.

