ಇಂದಿನ ಅತಿಯಾದ ಧಾವಂತದ ಬದುಕಿನಲ್ಲಿ ಮನುಷ್ಯತ್ವ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಬೆಳಗಾವಿಯಲ್ಲಿ ಇಂದು ನಡೆದ ಈ ಘಟನೆಯೇ ಸಾಕ್ಷಿ. ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅಸಹಾಯಕ ವೃದ್ಧರೊಬ್ಬರ ನೆರವಿಗೆ ಧಾವಿಸಿದ ಸಮಾಜಸೇವಕರು, ಸಕಾಲದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಪ್ರಾಣ ಉಳಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇಂದು ವೃದ್ಧರೊಬ್ಬರು ಹಠಾತ್ತನೆ ಪ್ರಜ್ಞೆ ತಪ್ಪಿ ರಸ್ತೆಯ ಮೇಲೆ ಬಿದ್ದ ಘಟನೆ ಜರುಗಿತು. ಇದನ್ನು ಗಮನಿಸಿದ ಸಮಾಜಸೇವಕರಾದ ರಾಜಶೇಖರ ಹಿಂಡಲಗಿ ಹಾಗೂ ಕಾರ್ತಿಕ್ ತಳವಾರ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ರಸ್ತೆಯಲ್ಲಿ ಬಿದ್ದಿದ್ದ ವೃದ್ಧರನ್ನು ಉಪಚರಿಸಿ ಎಬ್ಬಿಸಿದರು. ವಿಳಂಬ ಮಾಡದೆ ಆಂಬುಲೆನ್ಸ್ ಕರೆಸಿ ವೃದ್ಧರನ್ನು

ಬೆಳಗಾವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಕಾಲದಲ್ಲಿ ಸ್ಪಂದಿಸಿದ ಈ ಯುವಕರ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
