ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ರಾಹ್ಮಣರ ಪಿತ್ರಾಜರ್ಿತ ಜಮೀನುಗಳನ್ನು ಅಕ್ರಮವಾಗಿ ಕಬಳಿಸಿರುವ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಕಬಳಿಕೆದಾರರು ಮಾತ್ರವಲ್ಲದೆ, ಆ ದಾಖಲೆಗಳ ಆಧಾರದ ಮೇಲೆ ಭೂ ನೋಂದಣಿ ನಡೆಸಿದ ಸಬ್-ರಿಜಿಸ್ಟ್ರಾರ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಆಗ್ರಹಿಸಿದೆ.


ಇಂದು ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಮತ್ತು ಉಪಾಧ್ಯಕ್ಷ ಭರತ ದೇಶಪಾಂಡೆ ನೇತೃತ್ವದಲ್ಲಿ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಕಲಿ ದಾಖಲೆ ಆಧಾರದಲ್ಲಿ ನಡೆದ ಎಲ್ಲಾ ಭೂ ನೋಂದಣಿಗಳ ಸಮಗ್ರ ತನಿಖೆ ನಡೆಸಬೇಕು. ಸಂಬಂಧಿತ ಸಬ್-ರಿಜಿಸ್ಟ್ರಾರ್ಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎನ್ನುವುದು ಸೇರಿದಂತೆ ಸಮಾಜದ ಪೀಡಿತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ಒದಗಿಸಿ, ಅವರ ಹಕ್ಕುಗಳನ್ನು ಕಾನೂನುಬದ್ಧವಾಗಿ ಪುನರ್ ಸ್ಥಾಪಿಸಬೇಕು ಎಂದು ಟ್ರಸ್ಟ್ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಭೂ ನೋಂದಣಿ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ಬ್ರಾಹ್ಮಣ ಸಮಾಜ ಮನವಿ ಮಾಡಿದೆ. ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಪೀಳಿಗೆಯಿಂದ ಪೀಳಿಗೆ ಬಂದಿರುವ ಬ್ರಾಹ್ಮಣ ಸಮುದಾಯದ ಪಿತ್ರಾರ್ಜಿತ ಆಸ್ತಿಗಳ ಮೇಲೆ ಸಂಘಟಿತ ರೀತಿಯಲ್ಲಿ ನಕಲಿ ಹಕ್ಕುಪತ್ರ, ಕೃತಕ ಸಹಿ, ಸತ್ತವರನ್ನು ಜೀವಂತವಾಗಿ ತೋರಿಸುವ ದಾಖಲೆಗಳ ಮೂಲಕ ಭೂ ವಗರ್ಾವಣೆ ನಡೆದಿರುವ ಆರೋಪಗಳು ಕೇಳಿಬಂದಿದ್ದು ಇದು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.ವಿಶೇಷವಾಗಿ ಬೆಳಗಾವಿ ಮತ್ತು ಖಾನಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಸಬ್-ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಾಖಲೆಗಳ ಸಮರ್ಪಕ ಪರಿಶೀಲನೆ ಇಲ್ಲದೆ ನೋಂದಣಿಗಳು ನಡೆಯುತ್ತಿವೆ. “ನಕಲಿ ದಾಖಲೆಗಳ ಆಧಾರದಲ್ಲಿ ಭೂ ನೋಂದಣಿ ಸಾಧ್ಯವೇ? ಅಧಿಕಾರಿಗಳ ನಿರ್ಲಕ್ಷ್ಯವಿಲ್ಲದೆ ಇದು ಹೇಗೆ ಸಂಭವಿಸಿತು? ಎಂದು ಭರತ್ ದೇಶಪಾಂಡೆ ಪ್ರಶ್ನಿಸಿದರು.
ಮನವಿ ಸಲ್ಲಿಸುವ ವೇಳೆ ಖಜಾಂಚಿ ರಮೇಶ ಕುಲಕರ್ಣಿ, ಜಂಟೀ ಕಾರ್ಯದರ್ಶಿ ವಿಲಾಸ ಜೋಶಿ, ಆಡಳಿತ ಮಂಡಳಿ ಸದಸ್ಯೆ ಅನುಶ್ರೀ ದೇಶಪಾಂಡೆ, ಬಿ.ಆರ್.ಪಾಟೀಲ, ಜಿ.ಡಿ.ಜೋಶಿ, ಅಶೋಕ ದೇಶಪಾಂಡೆ, ಪ್ರಸಾದ ಕಾರಜೋಳ, ಡಾ. ಕುಲಕರ್ಣಿ, ಅನಿಲ ಕುಲಕರ್ಣಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
