Dharwad

ಫೆಬ್ರವರಿ 28 ರಿಂದ ಮಾರ್ಚ 17 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ; ಜಿಲ್ಲೆಯಲ್ಲಿ 26,954 ವಿದ್ಯಾರ್ಥಿಗಳಿಂದ ನೋಂದಣಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

Share

ಪ್ರಸ್ತಕ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಯು ಫೆಬ್ರವರಿ 28, 2026 ರಿಂದ ಮಾರ್ಚ್ 17, 2026 ರವರೆಗೆ ನಡೆಯಲಿವೆ. ಪ್ರತಿದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ, ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ 12,665 ಪುರುಷ ಹಾಗೂ 14,289 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 26,954 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಪ್ರಥಮ ಬಾರಿಗೆ ಪಿಯುಸಿ ಪರೀಕ್ಷೆಗೆ ಹಾಜರಾಗುತ್ತೀರುವವರು 11,269 ಪುರುಷ ಹಾಗೂ 13,445 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 24,714 ವಿದ್ಯಾರ್ಥಿಗಳು ಪರೀಕ್ಷೆಗೆ ದಾಯಿಸಿಕೊಂಡಿದ್ದಾರೆ. ಮತ್ತು ಪುರಾವರ್ತಿತ ಪರೀಕ್ಷಾರ್ಥಿಗಳು 1,234 ಪುರುಷ ಹಾಗೂ 682 ಮಹಿಳಾ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳಾಗಿ 150 ಪುರುಷ ಹಾಗೂ 148 ಮಹಿಳಾ ವಿದ್ಯಾರ್ಥಿಗಳು ಹಾಗೂ ಫಲಿತಾಂಶ ಸುಧಾರಣೆಗಾಗಿ 12 ಪುರುಷ ಮತ್ತು 14 ಮಹಿಳಾ ವಿದ್ಯಾರ್ಥಿಗಳು ಸೇರಿದಂತೆ 2240 ಪರೀಕ್ಷಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 3,152 ಪುರುಷ ಹಾಗೂ 3,455 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 6,607 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 3,315 ಪುರುಷ ಹಾಗೂ 3,863 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 7,178 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 6,198 ಪುರುಷ ಹಾಗೂ 6,971 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 13,169 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 176 ಕಾಲೇಜುಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು 43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಧಾರವಾಡ 16, ಹುಬ್ಬಳ್ಳಿ 18, ಅಳ್ನಾವರ 1, ಕಲಘಟಗಿ 2, ಕುಂದಗೋಳ 3, ನವಲಗುಂದ 2 ಹಾಗೂ ಅಣ್ಣಿಗೇರಿ 1 ಪರೀಕ್ಷಾ ಕೇಂದ್ರಗಳಿವೆ ಎಂದು ಅವರು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಪೂರ್ವಭಾವಿ ಭೇಟಿ ನೀಡಿ, ಸಿಸಿಟಿವಿ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳಿರುವುದನ್ನು ಖಚಿತಪಡಿಸಲಾಗಿದೆ. ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಮುಖ್ಯಾಧಿಕಾರಿಗಳಿಗೆ ಪರೀಕ್ಷೆಯನ್ನು ಸುಗಮ, ಶಾಂತಿಯುತ ಹಾಗೂ ಗೊಂದಲರಹಿತವಾಗಿ ನಡೆಸುವಂತೆ ಹಾಗೂ ಯಾವುದೇ ನಕಲುಗಳಿಗೆ ಅವಕಾಶ ಕೊಡಬಾರದೆಂದು ಕಟ್ಟುನಿಟ್ಟಿನ ನಿರ್ದೇಶನವನ್ನು ಜಿಲ್ಲಾಧಿಕಾರಿಗಳು ನೀಡಿದರು.

ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಆ ವ್ಯಾಪ್ತಿಯಲ್ಲಿರುವ ಜರಾಕ್ಸ್, ಸೈಬರ್ ಸೆಂಟರ್ ಹಾಗೂ ಕಂಪ್ಯೂಟರ್ ಕೇಂದ್ರಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಪಿಯುಸಿ ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

Tags:

error: Content is protected !!