State

ಅಬಕಾರಿ ಭ್ರಷ್ಟಾಚಾರದ ಆರೋಪ ನಿರಾಧಾರ, ನಾಯಕತ್ವ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ತೆರೆ ಎಳೆಯಲಿ ಎಂದ ‘ಸಾಹುಕಾರ್’!

Share

ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಆರೋಪ ಹಾಗೂ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಗೆಯಾಡುತ್ತಿರುವ ನಾಯಕತ್ವ ಬದಲಾವಣೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಂದು ಬೆಂಗಳೂರಿನಲ್ಲಿ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿರುವ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿರುವ ಅವರು, ಪಕ್ಷದೊಳಗಿನ ಗೊಂದಲಗಳನ್ನು ಹೈಕಮಾಂಡ್ ಶೀಘ್ರವೇ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದ ಕುರಿತು ಮಾತನಾಡಿದ ಸಚಿವರು, “ಯಾವುದೇ ಆರೋಪ ಸಾಬೀತಾಗುವ ಮುನ್ನವೇ ರಾಜೀನಾಮೆ ಕೇಳುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು. ಹಿಂದೆ ಬಿಜೆಪಿ ಸರ್ಕಾರದಲ್ಲೂ ಮೂವರು ಸಚಿವರ ಮೇಲೆ ಆರೋಪವಿದ್ದಾಗ ಇರದ ರಾಜೀನಾಮೆ ಪರಿಪಾಠ ಈಗೇಕೆ ಎಂದು ಕಿಡಿಕಾರಿದರು. ಯಾರೋ ಮಾತನಾಡಿದ ವಿಡಿಯೋಗಳನ್ನು ಇಟ್ಟುಕೊಂಡು ಸಚಿವರ ರಾಜೀನಾಮೆ ಕೇಳುವುದು ತರ್ಕಬದ್ಧವಲ್ಲ. ಮಾರುಕಟ್ಟೆಯಲ್ಲಿ ಎಲ್ಲಾ ಇಲಾಖೆಗಳ ಬಗ್ಗೆಯೂ ಇಂತಹ ಚರ್ಚೆಗಳು ನಡೆಯುತ್ತಿರುತ್ತವೆ, ಅದಕ್ಕೆಲ್ಲ ಸಚಿವರು ಹೊಣೆಯಾಗುವುದಿಲ್ಲ ಎಂದು ಅಬಕಾರಿ ಸಚಿವರ ಪರ ಬ್ಯಾಟ್ ಮಾಡಿದರು.

ಇನ್ನು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಈ ವಿಷಯದಲ್ಲಿ ಕೇವಲ ಒಬ್ಬರಲ್ಲಿ ಮಾತ್ರವಲ್ಲ, ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ಶಾಸಕರಲ್ಲಿಯೂ ಗೊಂದಲ ಮೂಡಿದೆ ಎಂಬ ಸತ್ಯವನ್ನು ಒಪ್ಪಿಕೊಂಡರು. ಈ ಗೊಂದಲಗಳು ಪಕ್ಷದ ಮೇಲೆ ಪರಿಣಾಮ ಬೀರದಂತೆ ಹೈಕಮಾಂಡ್ ನಾಯಕರು ಶೀಘ್ರವೇ ಮಧ್ಯಪ್ರವೇಶಿಸಿ ಅಂತಿಮ ನಿರ್ಧಾರ ಪ್ರಕಟಿಸಬೇಕು ಎಂದರು. ಇದೇ ವೇಳೆ, ನಮ್ಮದೇ ಪಕ್ಷದ ಪ್ರಭಾವಿ ಶಾಸಕರು ಸರ್ಕಾರದ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಸಚಿವರು ಸಂಪೂರ್ಣವಾಗಿ ನಿರಾಕರಿಸಿದರು.

Tags:

error: Content is protected !!