ಬಾಗಲಕೋಟೆಯಲ್ಲಿ ಕಲ್ಲು ತೂರಾಟದ ಬೆನ್ನಲ್ಲೇ ಬಿಗುವಿನ ವಾತಾವರಣ ಮುಂದುವರಿದಿದೆ. 144ನೇ ಸೆಕ್ಷನ್ ಜಾರಿಯಲ್ಲಿದ್ದರೂ ಸಹ, ಇಂದು ಮಧ್ಯಾಹ್ನ ಬೃಹತ್ ಹಿಂದೂ ಸಮ್ಮೇಳನ ನಡೆಸಲು ಹಿಂದೂ ಪರ ಸಂಘಟನೆಗಳು ಸಜ್ಜಾಗಿದ್ದು, ಜಿಲ್ಲಾಡಳಿತಕ್ಕೆ ಸಂಜೆಯವರೆಗೆ ಗಡುವು ನೀಡಿವೆ.


ಬಾಗಲಕೋಟೆ ನಗರದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದರೂ, ಪೂರ್ವ ನಿಯೋಜಿತ ‘ಹಿಂದೂ ಸಮ್ಮೇಳನ’ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ನವನಗರದ 30ನೇ ಸೆಕ್ಟರ್ನ ಉದ್ಭವ ಗಣಪತಿ ದೇವಾಲಯದಿಂದ ಭವ್ಯ ಶೋಭಾ ಯಾತ್ರೆ ಆರಂಭವಾಗಲಿದ್ದು, ಸೆಕ್ಟರ್ 52ರ ವೀರಭದ್ರೇಶ್ವರ ದೇವಾಲಯದಲ್ಲಿ ಸಮಾರೋಪಗೊಳ್ಳಲಿದೆ. ಈ ಮೆರವಣಿಗೆಯ ನಂತರ ಬೃಹತ್ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ವಿವಿಧ ಮಠಾಧೀಶರು, ರಾಜಕೀಯ ಮುಖಂಡರು ಹಾಗೂ ಹಿಂದೂ ಪರ ಸಂಘಟನೆಗಳ ಗಣ್ಯರು ಭಾಗವಹಿಸಲಿದ್ದಾರೆ.

ಸಮ್ಮೇಳನ ನಡೆಸುವ ಕುರಿತು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದ್ದು, ಜಿಲ್ಲಾಡಳಿತಕ್ಕೆ ಇಂದು ಸಂಜೆಯವರೆಗೆ ಡೆಡ್ಲೈನ್ ನೀಡುವ ಮೂಲಕ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಇತ್ತೀಚಿನ ಗಲಭೆಗಳ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಇಬ್ಬರು ಹಿರಿಯ ಎಸ್ಪಿಗಳ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸಮ್ಮೇಳನ ನಡೆಯುವ ಮಾರ್ಗದುದ್ದಕ್ಕೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಈಗ ಇಲಾಖೆಗೆ ದೊಡ್ಡ ಸವಾಲಾಗಿದೆ.
