ಕುಂದಾನಗರಿ ಬೆಳಗಾವಿಯ ಮಹಾಂತೇಶ ನಗರ ಉಪನಗರದಲ್ಲಿ ಇಂದು ಕೇಸರಿ ಕಳೆ ಮೇಳೈಸಿತ್ತು. ಹಿಂದೂ ಸಮ್ಮೇಳನ ಸಮಿತಿಯ ವತಿಯಿಂದ ‘ವಿರಾಟ ಹಿಂದೂ ಸಮ್ಮೇಳನ’ದ ಅಂಗವಾಗಿ ಅತ್ಯಂತ ಸನಾತನ ಸಂಸ್ಕೃತಿಯ ಜಾಗೃತಿ ಮೂಡಿಸಲೂ ಬೃಹತ್ ಶೋಭಾ ಯಾತ್ರೆಯನ್ನು ನಡೆಸಲಾಯಿತು.


ಫೆಬ್ರವರಿ 6ರ ಶುಕ್ರವಾರ ಸಾಯಂಕಾಲ ಶ್ರೀನಗರ ಸರ್ಕಲ್‌ನಿಂದ ಆರಂಭವಾದ ಭವ್ಯ ಶೋಭಾಯಾತ್ರೆಯು ಸಾರ್ವಜನಿಕರ ಗಮನ ಸೆಳೆಯಿತು. ಈ ಮೆರವಣಿಗೆಯ ವಿಶೇಷತೆಯೆಂದರೆ ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಮಹಾಪುರುಷರ ವೇಷಧಾರಣೆ ಸ್ಪರ್ಧೆ. ನೂರಾರು ಮಕ್ಕಳು ಛತ್ರಪತಿ ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರರು, ಡಾ. ಅಂಬೇಡ್ಕರ್, ಸುಭಾಷಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ವೀರರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವೇಷಭೂಷಣ ತೊಟ್ಟು ಇತಿಹಾಸವನ್ನು ಕಣ್ಣಮುಂದೆ ತಂದರು.

“ಹಿಂದೂ ನಾವೆಲ್ಲ ಒಂದು, ನಾವೆಲ್ಲ ಬಂಧು” ಎಂಬ ಘೋಷಣೆಯೊಂದಿಗೆ ಸಾಗಿದ ಈ ಶೋಭಾಯಾತ್ರೆಯುದ್ದಕ್ಕೂ ಸಾಂಸ್ಕೃತಿಕ ವೈಭವದ ಮೆರುಗು ಎದ್ದುಕಂಡಿತು. ನಮ್ಮ ಪೂರ್ವಜರ ತ್ಯಾಗ ಮತ್ತು ಹೋರಾಟದ ಫಲವಾಗಿ ಇಂದು ಹಿಂದೂ ಸಂಸ್ಕೃತಿ ಜೀವಂತವಾಗಿದೆ. ಈ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಸಮಿತಿಯ ಪದಾಧಿಕಾರಿಗಳು ಪ್ರತಿಪಾದಿಸಿದರು.

ಮಹಾಂತೇಶ ನಗರ, ಶ್ರೀನಗರ ಹಾಗೂ ಶಿವಬಸವ ನಗರದ ಸಾವಿರಾರು ಭಕ್ತರು ಮತ್ತು ಸಾರ್ವಜನಿಕರು ಈ ಸಮ್ಮೇಳನದಲ್ಲಿ ಭಾಗವಹಿಸಿ, ಸಂಘಟಿತ ಸಮಾಜದ ಮೂಲಕ ರಾಷ್ಟ್ರದ ಉನ್ನತಿಗೆ ಕೈಜೋಡಿಸುವ ಸಂಕಲ್ಪ ಮಾಡಿದರು.
