ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದಲ್ಲಿ ಮತ್ತೆ ಕಳ್ಳರ ಗ್ಯಾಂಗ್ ಸಕ್ರಿಯವಾಗಿದ್ದು, ಜನಸಾಮಾನ್ಯರ ನಿದ್ದೆಗೆಡಿಸಿದೆ. ವಿದ್ಯಾಗಿರಿ ಬಡಾವಣೆಯಲ್ಲಿ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ಐವರು ಕಿರಾತಕರು, ಅಡ್ಡ ಬಂದವರ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವುದು ಇಡೀ ನಗರವನ್ನು ಬೆಚ್ಚಿಬೀಳುವಂತೆ ಮಾಡಿದೆ.

ಇಳಕಲ್ಲ ನಗರದ ವಿದ್ಯಾಗಿರಿ ಪ್ರದೇಶದಲ್ಲಿ ಕಳೆದ ರಾತ್ರಿ ಐವರು ಕಳ್ಳರ ಗ್ಯಾಂಗ್ ಭೀಭತ್ಸ ಸೃಷ್ಟಿಸಿದೆ. ಸರಿಸುಮಾರು 6ಕ್ಕೂ ಹೆಚ್ಚು ಮನೆಗಳು ಹಾಗೂ ಒಂದು ಚಿಪ್ಸ್ ಫ್ಯಾಕ್ಟರಿಯನ್ನು ಗುರಿಯಾಗಿಸಿಕೊಂಡಿದ್ದ ಈ ತಂಡ, ಕಳ್ಳತನಕ್ಕೆ ವಿಫಲ ಯತ್ನ ನಡೆಸಿದೆ. ಈ ವೇಳೆ ಮನೆಯಿಂದ ಹೊರಬಂದ ನಿವಾಸಿಗಳು “ಯಾರು ನೀವು?” ಎಂದು ಪ್ರಶ್ನಿಸಿದ್ದಕ್ಕೆ, ಕಿರಾತಕರು ಅವರ ಮೇಲೆಯೇ ಕಲ್ಲು ಎಸೆದು ಮಾರಣಾಂತಿಕ ಹಲ್ಲೆಗೆ ಮುಂದಾಗಿದ್ದಾರೆ. ಕೈಯಲ್ಲಿ ಲಾಂಗು-ಮಚ್ಚುಗಳಂತಹ ಮಾರಕಾಸ್ತ್ರಗಳನ್ನು ಹಿಡಿದು ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ಗಸ್ತಿಗೆ ಬಂದ ಪೊಲೀಸರನ್ನು ಕಂಡು ಕಳ್ಳರ ತಂಡ ಕತ್ತಲಲ್ಲಿ ಪರಾರಿಯಾಗಿದೆ. ಸದ್ಯ ಈ ಪ್ರಕರಣವು ಇಳಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಆಕ್ರೋಶಗೊಂಡಿರುವ ನಾಗರಿಕರು, ಕೂಡಲೇ ಕಳ್ಳರನ್ನು ಬಂಧಿಸಿ ನಗರದಲ್ಲಿ ಬಿಗುವಿನ ಭದ್ರತೆ ಒದಗಿಸಬೇಕೆಂದು ಕಟ್ಟುನಿಟ್ಟಿನ ಒತ್ತಾಯ ಹೇರಿದ್ದಾರೆ.
