Bagalkot

ಕಾಗದಕ್ಕಷ್ಟೇ ಸೀಮಿತವಾಯ್ತು ರಾಂಪೂರ ಬಸ್ ನಿಲ್ದಾಣ: ಅಧಿಕಾರಿಗಳ ಜಿದ್ದಾಜಿದ್ದಿಗೆ ಬಲಿಯಾಯ್ತು ಸಾರ್ವಜನಿಕರ ಕನಸು!

Share

ಬಾಗಲಕೋಟೆ ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರ ರಾಂಪೂರದಲ್ಲಿ ಬಸ್ ನಿಲ್ದಾಣಕ್ಕಾಗಿ ಭೂಮಿ ಮಂಜೂರಾಗಿ ನಾಲ್ಕು ವರ್ಷಗಳೇ ಉರುಳಿದವು. ಆದರೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಈ ಊರಿನಲ್ಲಿ ಸುಸಜ್ಜಿತ ನಿಲ್ದಾಣವೊಂದು ಇನ್ನೂ ತಲೆ ಎತ್ತಿಲ್ಲ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.”

ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮವು ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಶೈಕ್ಷಣಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ಪದವಿ ಕಾಲೇಜು, ಹಾಸ್ಟೆಲ್ ಹಾಗೂ ಸರ್ಕಾರಿ ಕಚೇರಿಗಳಿರುವುದರಿಂದ ನಿತ್ಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಂದು ಹೋಗುತ್ತಾರೆ. 2021ರಲ್ಲೇ ಸುಮಾರು 1.1 ಎಕರೆ ಭೂಮಿಯನ್ನು ಬಸ್ ನಿಲ್ದಾಣಕ್ಕಾಗಿ ಮೀಸಲಿರಿಸಲಾಗಿದ್ದು, ಜಿಲ್ಲಾಧಿಕಾರಿಗಳ ಖಡಕ್ ಸೂಚನೆಯೂ ಇತ್ತು. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಲು ತೋರಿಸುತ್ತಿರುವ ವಿಳಂಬ ನೀತಿಯಿಂದಾಗಿ ಯೋಜನೆಗೆ ಗ್ರಹಣ ಹಿಡಿದಿದೆ. ಅಧಿಕಾರಿಗಳ ಈ ಉದಾಸೀನತೆಯಿಂದಾಗಿ ಸಾರಿಗೆ ಸಂಸ್ಥೆಯು ಜಾಗವನ್ನು ತನ್ನ ವಶಕ್ಕೆ ಪಡೆಯಲು ಸಾಧ್ಯವಾಗುತ್ತಿಲ್ಲ, ಪರಿಣಾಮವಾಗಿ ಪ್ರಯಾಣಿಕರು ಮಳೆ-ಬಿಸಿಲಿನಲ್ಲಿ ರಸ್ತೆಯಲ್ಲೇ ನಿಂತು ಪರದಾಡುತ್ತಿದ್ದಾರೆ.

ಗ್ರಾಮದಲ್ಲಿ ಬಸ್ ನಿಲ್ದಾಣದ ಕೊರತೆಯಿಂದಾಗಿ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದೆ, ಇದು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ ಸ್ಥಳೀಯ ವಾಣಿಜ್ಯೋದ್ಯಮದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಪುನರ್ವಸತಿ ಅಧಿಕಾರಿಗಳಿಗೆ ಹಲವು ಬಾರಿ ನೋಟಿಸ್ ನೀಡಿದರೂ ಅವರು ಕ್ಯಾರೇ ಎನ್ನುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಬಲ ಆರೋಪ. ಈ ಭಾಗದ ಜನರಿಗೆ ಒಂದು ಸಣ್ಣ ತಗಡಿನ ಶೆಡ್ ಹೊರತುಪಡಿಸಿ ಬೇರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಹೋಬಳಿ ಕೇಂದ್ರವಾಗಿರುವ ರಾಂಪೂರದ ಅಭಿವೃದ್ಧಿಗೆ ಈಗ ಅತಿಕ್ರಮಣದಾರರ ಹಿತಾಸಕ್ತಿ ಹಾಗೂ ಅಧಿಕಾರಿಗಳ ಸಮನ್ವಯದ ಕೊರತೆಯೇ ದೊಡ್ಡ ಅಡ್ಡಿಯಾಗಿ ಪರಿಣಮಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ.

ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸ್ಥಳ ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ತಕ್ಷಣವೇ ಅತಿಕ್ರಮಣ ತೆರವುಗೊಳಿಸಿ ಕಾಮಗಾರಿ ಆರಂಭಿಸದಿದ್ದರೆ, ಗ್ರಾಮಸ್ಥರು ಬೃಹತ್ ಪ್ರತಿಭಟನೆಯ ಹಾದಿ ಹಿಡಿಯುವುದು ಖಚಿತವಾಗಿದೆ. ಆಡಳಿತ ವರ್ಗ ಇನ್ನಾದರೂ ಎಚ್ಚೆತ್ತುಕೊಂಡು ರಾಂಪೂರಕ್ಕೆ ಬಸ್ ನಿಲ್ದಾಣದ ಭಾಗ್ಯ ಕಲ್ಪಿಸಿಕೊಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!