Bagalkot

ಅಕ್ರಮ ಡೀಸೆಲ್ ದಂಧೆ ಬಯಲಿಗೆಳೆದ ಪಂಪ್ ಮಾಲೀಕನಿಗೆ ಧಮ್ಕಿ; ಪೊಲೀಸರ ಮೌನಕ್ಕೆ ಆಕ್ರೋಶ

Share

ಬಾಗಲಕೋಟೆ ಜಿಲ್ಲೆಯ ಲೋಕಾಪುರದಲ್ಲಿ ಅಕ್ರಮ ಡೀಸೆಲ್ ಸ್ಮಗ್ಲಿಂಗ್ ದಂಧೆ ಜೋರಾಗಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ ಪೆಟ್ರೋಲ್ ಪಂಪ್ ಮಾಲೀಕನಿಗೆ ದಂಧೆಕೋರರು ಬಹಿರಂಗವಾಗಿಯೇ ಧಮ್ಕಿ ಹಾಕಿರುವ ಘಟನೆ ನಡೆದಿದೆ. ದೂರು ನೀಡಿ ಎರಡು ದಿನ ಕಳೆದರೂ ಎಫ್‌ಐಆರ್ ದಾಖಲಿಸದ ಪೊಲೀಸರ ನಡೆ ಈಗ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಲೋಕಾಪುರ ಹೊರವಲಯದ ಗ್ಯಾರೇಜ್ ವೊಂದರಲ್ಲಿ ಡೀಸೆಲ್ ಫಿಲ್ಲಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು. ಈ ಬಗ್ಗೆ ಹೆಚ್‌ಪಿ ಪೆಟ್ರೋಲ್ ಪಂಪ್ ಮಾಲೀಕ ಲೋಕಣ್ಣ ಕತ್ತಿ ಅವರು ಈ ಹಿಂದೆಯೇ ಎಸ್‌ಪಿ ಹಾಗೂ ಮುಧೋಳ ಸಿಪಿಐ ಅವರಿಗೆ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಗದಿದ್ದಾಗ ಅವರು ಮಾಧ್ಯಮಗಳ ಮುಂದೆ ಅಕ್ರಮವನ್ನು ಬಯಲು ಮಾಡಿದ್ದರು. ಇದರಿಂದ ಕಂಗೆಟ್ಟ ದಂಧೆಕೋರರು ಮತ್ತು ಗ್ಯಾರೇಜ್ ಹುಡುಗರು ಲೋಕಣ್ಣ ಅವರಿಗೆ ಧಮ್ಕಿ ಹಾಕಿದ್ದು, ಈ ವಿಡಿಯೋ ಈಗ ಲಭ್ಯವಾಗಿದೆ. ಸದ್ಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ದಂಧೆಗೆ ಬಳಸುತ್ತಿದ್ದ ಮೆಷಿನ್ ಹಾಗೂ ಟ್ಯಾಂಕರ್‌ಗಳನ್ನು ಮಾಫಿಯಾ ರಾತ್ರೋರಾತ್ರಿ ನಾಪತ್ತೆ ಮಾಡಿದೆ.

ಅಚ್ಚರಿಯ ವಿಷಯವೆಂದರೆ, ಸ್ಥಳದಲ್ಲಿ ಅಕ್ರಮದ ಕುರುಹುಗಳಿದ್ದರೂ ಪೊಲೀಸರು ಮಾತ್ರ “ಅಲ್ಲಿ ಏನೂ ಇಲ್ಲ” ಎಂದು ಫೋಟೋ ತೆಗೆದುಕೊಂಡು ಹೋಗಿ ನುಣುಚಿಕೊಳ್ಳುತ್ತಿದ್ದಾರೆ. ಅಕ್ರಮ ನಡೆಯುತ್ತಿಲ್ಲ ಎಂದಾದರೆ ಇದ್ದಕ್ಕಿದ್ದಂತೆ ಶೆಡ್ ಮತ್ತು ಟ್ಯಾಂಕರ್‌ಗಳು ಮಾಯವಾಗಿದ್ದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಅಗ್ನಿಶಾಮಕ ಇಲಾಖೆ ಹಾಗೂ ತೆರಿಗೆ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿರುವುದು ದಂಧೆಕೋರರಿಗೆ ರಾಜಾರೋಷವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಂತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಈ ಡೀಸೆಲ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!