BELAGAVI

ನ್ಯೂ ಗುಡ್‌ಶೆಡ್ ಶ್ರೀ ಗಣೇಶ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ; ಮಹಾಪ್ರಸಾದದಲ್ಲಿ ಭಾಗಿಯಾದ ಸಾವಿರಾರು ಭಕ್ತರು…

Share

ಬೆಳಗಾವಿಯ ನ್ಯೂ ಗುಡ್‌ಶೆಡ್ ರೋಡ್‌ನ 5ನೇ ಕ್ರಾಸ್‌ನಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿತ್ತು. ಹಲವು ದಿನಗಳಿಂದ ನಡೆಯುತ್ತಿದ್ದ ಶ್ರೀ ಗಣೇಶ ಮಂದಿರದ ಜೀರ್ಣೋದ್ಧಾರ ಕಾರ್ಯ ಸಂಪೂರ್ಣಗೊಂಡಿದ್ದು, ಇಂದು ಅತ್ಯಂತ ವೈಭವದಿಂದ ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಮಹಾಪ್ರಸಾದ ನೆರವೇರಿತು.

ಬೆಳಗಾವಿಯ ನ್ಯೂ ಗುಡ್‌ಶೆಡ್ ರೋಡ್ 5ನೇ ಕ್ರಾಸ್‌ನಲ್ಲಿರುವ ಶ್ರೀ ಗಣೇಶ ಮಂದಿರವು ನೂತನವಾಗಿ ಜೀರ್ಣೋದ್ಧಾರಗೊಂಡಿದ್ದು, ಮಂದಿರದಲ್ಲಿ ಶ್ರೀ ಗಣೇಶ, ಮೂಷಕ ಹಾಗೂ ಉತ್ಸವ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಫೆಬ್ರವರಿ 1ರಂದು ಶಹಾಪುರದ ಶಿವಾಜಿ ಉದ್ಯಾನವನದಿಂದ ಆರಂಭವಾಗಿದ್ದ ಭವ್ಯ ಶೋಭಾಯಾತ್ರೆಯು ಮಂದಿರ ತಲುಪಿದ ನಂತರ, ಹಿರಿಯ ಅರ್ಚಕರ ನೇತೃತ್ವದಲ್ಲಿ ವಿವಿಧ ಹೋಮ-ಹವನ ಹಾಗೂ ಕಳಸಾರೋಹಣದಂತಹ ಪವಿತ್ರ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ಇಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಡೆದ ಭವ್ಯ ಮಹಾಮಂಗಳಾರತಿಯ ನಂತರ ಮಂದಿರದ ಆವರಣದಲ್ಲಿ ಬೃಹತ್ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸುತ್ತಮುತ್ತಲಿನ ಪರಿಸರದ ಸಾವಿರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಶ್ರೀಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಭಜನೆ, ಕೀರ್ತನೆ ಹಾಗೂ ಧಾರ್ಮಿಕ ಘೋಷಣೆಗಳೊಂದಿಗೆ ಇಡೀ ಪ್ರದೇಶವು ಗಣಪತಿಯ ನಾಮಸ್ಮರಣೆಯಲ್ಲಿ ಮಿಂದೆದ್ದಿತು. ಈ ವೇಳೆ ಮಂದಿರದ ಟ್ರಸ್ಟಿ ವಿಶ್ವನಾಥ್ ಝಾಡ್ ಅವರು ಮಂದಿರದ ಜೀರ್ಣೋದ್ಧಾರದ ಹಂತಗಳನ್ನು ವಿವರಿಸುತ್ತಾ, ಸಮಸ್ತ ಭಕ್ತರ ಸಹಕಾರವನ್ನು ಸ್ಮರಿಸಿದರು.

ಈ ಐತಿಹಾಸಿಕ ಜೀರ್ಣೋದ್ಧಾರ ಕಾರ್ಯಕ್ರಮವು ಸ್ಥಳೀಯರಲ್ಲಿ ಹೊಸ ಉತ್ಸಾಹವನ್ನು ತುಂಬಿದ್ದು, ಭಕ್ತರು ಭಕ್ತಿಯ ಪರವಶತೆಯಲ್ಲಿ ಪಾಲ್ಗೊಂಡು ಗಣೇಶನ ಕೃಪೆಗೆ ಪಾತ್ರರಾದರು.

Tags:

error: Content is protected !!