Kagawad

ಉಗಾರದ ಪಿಪಲ್ಸ್ ಶಿಕ್ಷಣ ಸಂಸ್ಥೆ ಆದರ್ಶ ಸಂಸ್ಥೆ: ಮಹಾವೀರ ಪಡನಾಡ ಅಭಿಮತ.

Share

ವಿದ್ಯಾರ್ಥಿಗಳಿಗೆ ಕೇವಲ ವಿಷಯ ಪಟ್ಟಿಗಳಲ್ಲಿ ಜ್ಞಾನ ಬೋಧನೆ ಮಾಡದೆ ಅವರಿಗೆ ಮೌಲಿಕ ಶಿಕ್ಷಣ ನೀಡುವುದು ಅಗತ್ಯ. ಉಗಾರದ ಪಿಪಲ್ಸ್ ಎಜುಕೇಶನ್ ಸಂಸ್ಥೆ ಒಂದು ಮಾದರಿ ಸಂಸ್ಥೆಯಾಗಿದೆ. ಈ ಸಂಸ್ಥೆಯ ಒಟ್ಟು ಬೆಳವಣಿಗೆ ಕಂಡು ಸಂತೋಷಗೊಂಡಿದ್ದೇನೆ. ಸಂಸ್ಥೆಗೆ ಆರ್ಥಿಕ ನೆರವು ನೀಡುತ್ತೇನೆ ಎಂದು ಶಿಕ್ಷಣದ ದಾನವೀರ ಮಹಾವೀರ ಪಡನಾಡ ಉಗಾರದಲ್ಲಿ ಹೇಳಿದರು.

ಶುಕ್ರವಾರ ಸಂಜೆ ಉಗಾರ ಖುರ್ದ ಗ್ರಾಮದ ಪಿಪಲ್ಸ್ ಎಜುಕೇಶನ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಹಾವೀರ ಪಡನಾಡ ಡಿಜಿಟಲ್ ಕೊಠಡಿಗಾಗಿ 50 ಸಾವಿರ ರೂ. ದೇಣಿಗೆ ನೀಡಿದರು.

ಈ ಶಿಕ್ಷಣ ಸಂಸ್ಥೆಯಲ್ಲಿ ಎಲ್.ಕೆ.ಜಿದಿಂದ ಬಿಬಿಎ, ಬಿಕಾಂ ಪದವಿವರೆಗೆ ಶಿಕ್ಷಣ ನೀಡುವ ಎಲ್ಲಾ ವ್ಯವಸ್ಥೆಗಳಿವೆ. ಇಲ್ಲಿ ತಜ್ಞ ಶಿಕ್ಷಕರಿಂದ ಬೋಧನೆ ನಡೆಯುತ್ತದೆ. ಇದು ಒಂದು ಆದರ್ಶ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಲ್ಲಿಗೆ ಓದಿದ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನು ಕಂಡು ದಾನವೀರ ಮಹಾವೀರ ಪಡನಾಡ ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಪ್ರಾಚಾರ್ಯ ರಾಮಚಂದ್ರ ಕಿಲ್ಲೇದಾರ ಸಂಸ್ಥೆಯ ನಡೆದ ಬಂದ ದಾರಿ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳು ಮಾಡಿದ ಸಾಧನೆ ಕುರಿತು ಅತಿಥಿಗಳಿಗೆ ವಿವರಿಸಿದರು.

ಅದರಲ್ಲೂ ರಾಜ್ಯಮಟ್ಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿ ವರದ ಗಾಡಿವಡ್ಡರ ಹಾಗೂ ಗಣಿತ ವಿಷಯದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಸಾಧನೆಯನ್ನು ಉಲ್ಲೇಖಿಸಿ, ಅತಿಥಿಗಳು ಅವರನ್ನು ಗೌರವಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಮಾರ್ಗದರ್ಶಕ ಹಾಗೂ ಮಹಾರಾಷ್ಟ್ರದ ಉದ್ಯಮಿ ಭಾವುಸಾಹೇಬ ಕಚರೆ ವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸಹನಾ ಜಾಗಿರಧಾರ ವಿದ್ಯಾರ್ಥಿಗಳ ಸಾಧನೆ ಬಗ್ಗೆ ಮಾತನಾಡಿದರು. ಉಗಾರದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿಲೀಪ ಹುಲ್ಲೋಳಿ, ಅಮರ ಜಗತಾಪ, ಡಾ. ಪ್ರದೀಪ ಶೇಡಬಾಳಕರ, ಮಹಾವೀರ ಪಾಟೀಲ, ಪದ್ಮರಾಜ ಆಳಪ್ಪನವರ್, ಮನೋಜ ಕುಸನಾಳೆ ಸೇರಿದಂತೆ ಅನೇಕ ಶಿಕ್ಷಣಪ್ರೇಮಿಗಳು ಭಾಗವಹಿಸಿದ್ದರು.

Tags:

error: Content is protected !!