ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್‌ಗಳ ಪರವಾನಗಿ ನವೀಕರಣ ಸ್ಥಗಿತಗೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರದ ಹೊಸ ನಿಯಮಗಳಿಂದ ಸಂಕಷ್ಟಕ್ಕೀಡಾಗಿರುವ ಇಂಜಿನಿಯರ್‌ಗಳು, ಇಂದು ಮಾಜಿ ನಗರಸೇವಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳು ಮಾಜಿ ನಗರಸೇವಕ ವಿನಾಯಕ ಗುಂಜಟಕರ ಅವರ ನೇತೃತ್ವದಲ್ಲಿ ಇಂದು ಬೆಳಗಾವಿ ಅಪರ ಜಿಲ್ಲಾಧಿಕಾರಿ ವಿಜಯ್‌ಕುಮಾರ್ ಹೊನಕೇರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಸರ್ಕಾರದ ನೂತನ ಕಾನೂನಿನ ಪ್ರಕಾರ ಇಂಜಿನಿಯರ್‌ಗಳ ಪರವಾನಗಿ ನವೀಕರಣವನ್ನು ಸ್ಥಗಿತಗೊಳಿಸಿರುವುದು ಹಾಗೂ ನವೀಕರಣಕ್ಕಾಗಿ ಹಳೆಯ ಶಾಲಾ ದಾಖಲಾತಿಗಳನ್ನು ಕೇಳುತ್ತಿರುವುದು ಕಳೆದ 20-30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ಇಂಜಿನಿಯರ್‌ಗಳನ್ನು ಸಂಕಷ್ಟಕ್ಕೆ ದೂಡಿದೆ. ಡಿಪ್ಲೋಮಾ ಹಾಗೂ ಜೆಒಸಿ ಮಾಡಿದವರ ಕೆಲಸದ ಮಿತಿಯನ್ನು 1000 ಸ್ಕ್ವೇರ್ ಫೀಟ್‌ಗೆ ಸೀಮಿತಗೊಳಿಸಿರುವುದಕ್ಕೆ ಇಂಜಿನಿಯರ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ನಗರಸೇವಕ ವಿನಾಯಕ ಗುಂಜಟಕರ ಅವರು, “ಎ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ 2024 ರೊಳಗಿನ ಕಟ್ಟಡಗಳನ್ನು ನಿಯಮಾವಳಿಯಂತೆ ಸೇರ್ಪಡೆ ಮಾಡಬೇಕು. ಅಲ್ಲದೆ, ಪಾಲಿಕೆಯಲ್ಲಿ ಕೆಲಸ ಮಾಡುವ ಪ್ಲಂಬರ್‌ಗಳಿಂದಲೂ ವಿದ್ಯಾರ್ಹತೆಯ ಪ್ರಮಾಣಪತ್ರ ಕೇಳಲಾಗುತ್ತಿದೆ, ಕಡಿಮೆ ಶಿಕ್ಷಣ ಪಡೆದ ಅವರು ಅಂತಹ ದಾಖಲೆಗಳನ್ನು ಎಲ್ಲಿಂದ ತರಬೇಕು?” ಎಂದು ಪ್ರಶ್ನಿಸಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಈ ಬಗ್ಗೆ ಸಕಾರಾತ್ಮಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆಯ ನೂರಾರು ಇಂಜಿನಿಯರ್‌ಗಳು ಉಪಸ್ಥಿತರಿದ್ದರು.
