ಬಾಗಲಕೋಟೆ ಶಿವ ಜಯಂತಿ ವೇಳೆ ನಡೆದ ಕಲ್ಲು ತೂರಾಟದ ಪ್ರಕರಣ ತಣ್ಣಗಾಯ್ತು ಎನ್ನುವಷ್ಟರಲ್ಲಿ ಈಗ ಮತ್ತೊಂದು ಹೈಡ್ರಾಮಾ ನಡೆದಿದೆ. ಕಿಲ್ಲಾ ಗಲ್ಲಿಯಲ್ಲಿ ಹಿಂದೂ ಕಾರ್ಯಕರ್ತ ಮುತ್ತು ಮಾಗಿ ಎಂಬಾತನನ್ನು ವಶಕ್ಕೆ ಪಡೆಯಲು ಬಂದ ಪೊಲೀಸರನ್ನು ಸ್ಥಳೀಯ ಮಹಿಳೆಯರೇ ತಡೆದು ನಿಲ್ಲಿಸಿದ್ದಾರೆ. ಸರಿಯಾದ ಕಾರಣ ನೀಡದೆ ಬಂಧಿಸಲು ಮುಂದಾದ ಪೊಲೀಸರ ವಿರುದ್ಧ ಜನರು ರೊಚ್ಚಿಗೆದ್ದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.


ಹಳೆ ಬಾಗಲಕೋಟೆ ನಗರದ ಕಿಲ್ಲಾ ಗಲ್ಲಿ ಇಂದು ರಣರಂಗದಂತಾಗಿತ್ತು. ಶಿವ ಜಯಂತಿ ಗಲಾಟೆ ಸಂಬಂಧ ಹಿಂದೂ ಕಾರ್ಯಕರ್ತ ಮುತ್ತು ಮಾಗಿ ಎಂಬಾತನನ್ನು ಬಂಧಿಸಲು ಡಿವೈಎಸ್ಪಿ ಗಜಾನನ ಸುತ್ತಾರೆ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದರು. ಆದರೆ, ಯಾವುದೇ ಮುನ್ಸೂಚನೆ ಅಥವಾ ಕಾರಣ ನೀಡದೆ ವಶಕ್ಕೆ ಪಡೆಯಲು ಮುಂದಾದಾಗ ಸ್ಥಳೀಯ ಮಹಿಳೆಯರು ಪೊಲೀಸರನ್ನೇ ತಡೆದಿದ್ದಾರೆ. ಕಾರ್ಯಕರ್ತನನ್ನು ಪೊಲೀಸರ ಕಾರ್‌ನಿಂದ ಬಲವಂತವಾಗಿ ಕೆಳಗಿಳಿಸಿಕೊಂಡ ಮಹಿಳೆಯರು, ಪೊಲೀಸರ ವಾಹನ ಚಲಿಸದಂತೆ ರಸ್ತೆಗೆ ತಗಡಿನ ಶೀಟ್ ಮತ್ತು ಕಲ್ಲುಗಳನ್ನು ಇಟ್ಟು ಪ್ರತಿರೋಧ ಒಡ್ಡಿದರು. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತಳ್ಳಾಟ-ನುಕಾಟ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನವೇ ಪೊಲೀಸರು ಅಲ್ಲಿಂದ ವಾಪಸ್ ಆಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಅಡಿಷನಲ್ ಎಸ್ಪಿ ಮಂಜುನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಮುತ್ತು ಮಾಗಿ ಪೋಷಕರು ಮತ್ತು ಮಹಿಳೆಯರು ಅಡಿಷನಲ್ ಎಸ್ಪಿಗೆ ಮುತ್ತಿಗೆ ಹಾಕಿ ತಮ್ಮ ಅಳಲು ತೋಡಿಕೊಂಡರು. “ರಾತ್ರಿವೇಳೆ ಚರಂತಿಮಠದ ಸಮ್ಮುಖದಲ್ಲಿ ಶಾಂತಿ ಸಭೆ ನಡೆದಿದ್ದರೂ ಪೊಲೀಸರು ಯಾಕೆ ಈ ರೀತಿ ದಬ್ಬಾಳಿಕೆ ಮಾಡುತ್ತಿದ್ದಾರೆ? ಹೆಣ್ಣುಮಕ್ಕಳನ್ನು ಎಳೆದಾಡುವುದು ಎಷ್ಟು ಸರಿ?” ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಪೊಲೀಸರ ವರ್ತನೆಗೆ ದಿಕ್ಕಾರ ಕೂಗಿದ ಸ್ಥಳೀಯರು, ಸಿಪಿಐ ಬಿರಾದರ್ ಮತ್ತು ಪಿಸಿ ಮಹಾಂತೇಶ್ ಅವರ ಅಮಾನತ್ತಿಗೆ ಆಗ್ರಹಿಸಿದರು. ಸದ್ಯ ಪರಿಸ್ಥಿತಿ ಯಥಾಸ್ಥಿತಿಯಲ್ಲಿದ್ದರೂ, 10 ಗಂಟೆಯ ನಂತರ ವೀರೇಂದ್ರ ಚರಂತಿಮಠ ಅವರು ಸ್ಥಳಕ್ಕೆ ಭೇಟಿ ನೀಡಿ ಎಸ್ಪಿಯವರೊಂದಿಗೆ ಚರ್ಚೆ ನಡೆಸಲಿದ್ದಾರೆ.
