hubbali

ನಮ್ಮ ಆಟಗಾರರು ಟೀಮ್ ಇಂಡಿಯಾಕ್ಕೆ ಅರ್ಹರು” – ಜಮ್ಮು ಕಾಶ್ಮೀರ ಸಿಎಂ ಉಮ‌ರ್ ಅಬ್ದುಲ್ಲಾ ಸಂತಸ

Share

ಜಮ್ಮು ಮತ್ತು ಕಾಶ್ಮೀರ ತಂಡ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿ ಫೈನಲ್‌ಗೆ ತಲುಪಿರುವುದು ನಮಗೆ ಹೆಮ್ಮೆಯ ವಿಷಯ. ಇಲ್ಲಿನ ಪ್ರತಿಭೆಗಳು ಭಾರತೀಯ ರಾಷ್ಟ್ರೀಯ ತಂಡದ ಜರ್ಸಿ ಧರಿಸಲು ಸಂಪೂರ್ಣ ಅರ್ಹರಿದ್ದಾರೆ” ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳಿದ್ದಾರೆ.

ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಚೊಚ್ಚಲ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ರೀಡೆ ಮತ್ತು ರಾಜಕೀಯದ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.

ಮೊತ್ತ ಮೊದಲ ಬಾರಿ ಕಪ್ ಗೆಲ್ಲುವ ಅವಕಾಶ ನಮ್ಮ ಮುಂದಿದೆ. ಇದು ಕಾಶ್ಮೀರದ ಕ್ರಿಕೆಟ್ ಭವಿಷ್ಯವನ್ನೇ ಬದಲಿಸಬಲ್ಲದು. ನಮ್ಮಲ್ಲಿ ಅದ್ಭುತ ಕ್ರಿಕೆಟಿಗರಿದ್ದಾರೆ ಎಂಬ ಸತ್ಯ ಈಗ ಜಗತ್ತಿಗೆ ತಿಳಿಯಲಿದೆ. ಈವರೆಗೆ ಅವರಿಗೆ ಸರಿಯಾದ ವೇದಿಕೆ ಮತ್ತು ಪ್ರಚಾರ ಸಿಕ್ಕಿರಲಿಲ್ಲ. ಕ್ರಿಕೆಟ್ ಎನ್ನುವುದು ಧರ್ಮದ ಬೇಧಗಳನ್ನು ಮೀರಿ ಜನರನ್ನು ಒಂದಾಗಿಸುವ ಶಕ್ತಿಯಾಗಿದೆ. ಈ ಪವಿತ್ರ ರಂಜಾನ್ ಮಾಸದಲ್ಲಿ ನಮ್ಮ ತಂಡ ಕಪ್ ಗೆದ್ದು ಮನೆಗೆ ಮರಳಲಿದೆ ಎಂಬ ಭರವಸೆ ನನಗಿದೆ ಎಂದರು.

ಇದೇ ಸಂದರ್ಭದಲ್ಲಿ ಅರವಿಂದ ಕೇಜ್ರವಾಲ್ ಮತ್ತು ಇತರ ನಾಯಕರ ಬಿಡುಗಡೆಯನ್ನು ಸ್ವಾಗತಿಸಿದ ಉಮರ್ ಅಬ್ದುಲ್ಲಾ, “ಅವರಿಗೆ ಅಭಿನಂದನೆಗಳು. ಅವರ ಮೇಲಿದ್ದದ್ದು ಕೇವಲ ರಾಜಕೀಯ ಪ್ರೇರಿತ ಪ್ರಕರಣವಾಗಿತ್ತು. ನ್ಯಾಯಾಲಯ ಈ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ, ‘ನಿರಪರಾಧಿತ್ವದ ತತ್ವ’ವನ್ನು ಎತ್ತಿ ಹಿಡಿದಿದೆ’ ಎಂದು ಖುಷಿ ವ್ಯಕ್ತ ಪಡಿಸಿದರು.

ತಮ್ಮ ಹುಬ್ಬಳ್ಳಿ ಭೇಟಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಉಮರ್ ಅಬ್ದುಲ್ಲಾ, “ಹುಬ್ಬಳ್ಳಿಗೆ ಬರಲು ನಾನು ಬಹಳ ಆಸಕ್ತನಾಗಿದ್ದೆ. ಇದು ನನ್ನ ಮೊದಲ ಭೇಟಿ” ಎಂದು ತಿಳಿಸಿದರು.

Tags:

error: Content is protected !!