ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಭೀಕರ ಆನ್ಲೈನ್ ವಂಚನೆಯೊಂದು ನಡೆದಿದೆ. ಮೊಬೈಲ್ ನೆಟ್ವರ್ಕ್ ಸಮಸ್ಯೆಯೆಂದು ಸಿಮ್ ಬದಲಿಸಿದ ರೈತನೊಬ್ಬ ಇದೀಗ ಲಕ್ಷಾಂತರ ರೂಪಾಯಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕಬ್ಬು ಬೆಳೆದು ಸಾಲ ತೀರಿಸಲೆಂದು ಇಟ್ಟಿದ್ದ ಹಣ ಕ್ಷಣಾರ್ಧದಲ್ಲಿ ಖದೀಮರ ಪಾಲಾಗಿದೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಹಾವರಗಿ ಗ್ರಾಮದ ರೈತ ಶರಣಪ್ಪ ಸಂಗಪ್ಪ ಗಾಳಿ ಎಂಬುವವರು ಈ ಡಿಜಿಟಲ್ ದರೋಡೆಗೆ ಬಲಿಯಾದವರು. ಇತ್ತೀಚೆಗಷ್ಟೇ ಅವರ ಗ್ರಾಮೀಣ ಬ್ಯಾಂಕ್ ಖಾತೆಗೆ ಜಮೆಯಾಗಿದ್ದ ಸುಮಾರು 3 ಲಕ್ಷ ರೂಪಾಯಿ ಕಬ್ಬಿನ ಬಿಲ್ ಮೇಲೆ ಕಣ್ಣಿಟ್ಟಿದ್ದ ಸೈಬರ್ ಕಳ್ಳರು, ಅತ್ಯಂತ ವ್ಯವಸ್ಥಿತವಾಗಿ ವಂಚಿಸಿದ್ದಾರೆ. ಮೊಬೈಲ್ನಲ್ಲಿ ‘ನೋ ಸರ್ವಿಸ್’ ಬಂದ ಕಾರಣ ಇಳಕಲ್ನ ಏರ್ಟೆಲ್ ಕಚೇರಿಯಲ್ಲಿ ಡುಪ್ಲಿಕೇಟ್ ಸಿಮ್ ಪಡೆದಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಸಿಮ್ ಆಕ್ಟಿವೇಟ್ ಆದ 24 ಗಂಟೆಗಳ ಒಳಗಾಗಿ ಶರಣಪ್ಪ ಅವರ ಎರಡು ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಹಣವನ್ನು ಎಗರಿಸಲಾಗಿದೆ.
ಖದೀಮರು ಶರಣಪ್ಪ ಅವರ ಗ್ರಾಮೀಣ ಬ್ಯಾಂಕ್ ಖಾತೆಯಿಂದ ₹99,999 ಹಾಗೂ ಸ್ಟೇಟ್ ಬ್ಯಾಂಕ್ ಖಾತೆಯಿಂದ ₹84,000 ಸೇರಿದಂತೆ ಒಟ್ಟು ₹1,83,999 ಹಣವನ್ನು ಫೋನ್ ಪೇ ಮೂಲಕ ಎಂ.ಡಿ. ರಶೀದ್ ಖಾನ್ ಎಂಬ ವ್ಯಕ್ತಿಯ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಬ್ಯಾಂಕ್ ಸ್ಟೇಟ್ಮೆಂಟ್ ಪರಿಶೀಲಿಸಿದಾಗ ಸರಣಿ ವಂಚನೆ ಬೆಳಕಿಗೆ ಬಂದಿದ್ದು, ಕಕ್ಕಾಬಿಕ್ಕಿಯಾದ ರೈತ ತಕ್ಷಣ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಸದ್ಯ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕೌಂಟ್ ಫ್ರೀಜ್ ಮಾಡಿಸಲಾಗಿದೆ. ರೈತರು ಇಂತಹ ತಾಂತ್ರಿಕ ಬದಲಾವಣೆಗಳ ಸಮಯದಲ್ಲಿ ಜಾಗರೂಕರಾಗಿರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ.
