ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರು ಲೋಕಾಯುಕ್ತ ಪೊಲೀಸರಿಂದ ಲಾಕ್ ಆದ ವಿಚಾರದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಪೂರ್ತಿ ಮಾಹಿತಿ ಇಲ್ಲ. ಅದರ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಜನಪ್ರತಿನಿಧಿಗಳಾದವರು ಬಹಳ ಶುದ್ಧ ಹಸ್ತರಾಗಿರಬೇಕು. ಅವರು ಜನರ ಕೆಲಸ ಮಾಡಲು ಬಂದವರು. ಅದರ ಬಗ್ಗೆ ಪ್ರಾಥಮಿಕ ವರದಿ ಗಮನಿಸಿದಾಗ ಇದು ಮನಸ್ಸಿಗೆ ನೋವಾಗುವಂತಹ ವಿಷಯ. ಜನ ಪ್ರತಿನಿಧಿಗಳು ಸಾರ್ವಜನಿಕ ಬದುಕಿನಲ್ಲಿ ಜನರಿಗೆ ಆದರ್ಶವಾಗಿರಬೇಕು. ಇನ್ನೂ ಚಂದ್ರು ಲಮಾಣಿ ತಪ್ಪು ಮಾಡಿದ್ದಾರೋ ಮಾಡಿಲ್ಲವೋ ಎಂಬುದನ್ನು ಹೇಳಲು ಆಗುವುದಿಲ್ಲ. ಅ ದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಮಾಧ್ಯಮದಲ್ಲಿ ಬರುತ್ತಿದೆ. ಇದರ ಕುರಿತು ಸತ್ಯಾಸತ್ಯತೆ ತಿಳಿದು ಮಾತನಾಡುತ್ತೇನೆ. ಒಂದು ಕಡೆ ಹನ್ನೊಂದು ಲಕ್ಷ ಮತ್ತೊಂದು ಕಡೆ ಹದಿನೈದು ಲಕ್ಷ ಎಂದು ಮಾಧ್ಯಮದಲ್ಲಿ ಬರುತ್ತಿದೆ. ಬೇರೆ ಬೇರೆ ರೀತಿ ಫಿಗರ್ ಬರುತ್ತಿದೆ. ಅದರ ಕುರಿತು ಸಂಪೂರ್ಣ ಮಾಹಿತಿ ನೀಡಲು ಅಲ್ಲಿನ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಸಿ.ಸಿ.ಪಾಟೀಲರಿಗೆ ಹೇಳಿದ್ದೇನೆ. ಎಲ್ಲವನ್ನೂ ನೋಡಿ ಹೇಳಲು ಹೇಳಿದ್ದೇನೆ ಎಂದರು.
