Bagalkot

ಹೊಸ ಬಬಲಾದಿ ಕಾಲಜ್ಞಾನ 2026: ರಾಜ್ಯ ಸರ್ಕಾರದಲ್ಲಿ ಗೊಂದಲ, ದೇಶಕ್ಕೆ ಯುದ್ಧ ಭೀತಿ ಹಾಗೂ ಮಹಾನ್ ವ್ಯಕ್ತಿಗೆ ಸಂಚಿನ ಸಾವಿನ ಭವಿಷ್ಯ!

Share

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಸಂಭ್ರಮದಿಂದ ಜರುಗುತ್ತಿರುವ ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾರ ಹೊಸ ಬಬಲಾದಿ ಮಠದ ಜಾತ್ರಾ ಮಹೋತ್ಸವದಲ್ಲಿ ಇಂದು ಭವಿಷ್ಯವಾಣಿ ನುಡಿಯಲಾಗಿದೆ. ಶಿವರಾತ್ರಿ ಅಂಗವಾಗಿ ನಡೆಯುವ ಈ ಜಾತ್ರೆಯ ಕೊನೆಯ ದಿನ ಚಿಕ್ಕಯಪ್ಪ ಬರೆದ 2026ರ ತ್ರಿಕಾಲ ಜ್ಞಾನದ ನುಡಿಗಳು ಹೊರಬಿದ್ದಿದ್ದು, ಕೇಳಿದ ಭಕ್ತ ಸಮೂಹವೇ ಬೆಚ್ಚಿಬಿದ್ದಿದೆ.

ಜಮಖಂಡಿಯ ಹೊಸ ಬಬಲಾದಿ ಮಠದ ಪರಂಪರೆಯಂತೆ ಈ ವರ್ಷವೂ ಶಿವರಾತ್ರಿಯ ನಾಲ್ಕನೇ ದಿನದಂದು ಅತೀ ಮುಖ್ಯವಾದ ಕಾಲಜ್ಞಾನವನ್ನು ಹೊರಹಾಕಲಾಗಿದೆ. 2026ನೇ ಸಾಲಿನ ಭವಿಷ್ಯ ನುಡಿದಿರುವ ಕಾಲಜ್ಞಾನವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸುವ ಮುನ್ಸೂಚನೆ ನೀಡಿದೆ. “ರಾಜ್ಯ ಸರ್ಕಾರದಲ್ಲಿ ಗೊಂದಲಗಳು ಹೆಚ್ಚಾಗಲಿವೆ ಹಾಗೂ ಅಧಿಕಾರದ ಅವಧಿಯೊಳಗೆ ದೊಡ್ಡ ಬದಲಾವಣೆಗಳು ಘಟಿಸಲಿವೆ” ಎಂದು ನುಡಿಯಲಾಗಿದೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ಹಗಲು ದರೋಡೆಗಾರರ ಹಾವಳಿ ಹೆಚ್ಚಾಗಲಿದ್ದು, ಜನಸಾಮಾನ್ಯರು ಜಾಗೃತರಾಗಿರಬೇಕು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಪ್ರಕೃತಿ ವಿಕೋಪ ಮತ್ತು ಅಂತರಾಷ್ಟ್ರೀಯ ಮಟ್ಟದ ಗೊಂದಲಗಳ ಬಗ್ಗೆಯೂ ಕಾಲಜ್ಞಾನದಲ್ಲಿ ಉಲ್ಲೇಖವಿದ್ದು, ಭೀಕರ ಬಿರುಗಾಳಿಯಿಂದಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ ಅದು ಬೆಂಕಿಯಾಗಿ ಪರಿಣಮಿಸಿ ಸಾವು-ನೋವು ಸಂಭವಿಸಬಹುದು ಎಂದು ಹೇಳಲಾಗಿದೆ. ಆರ್ಥಿಕವಾಗಿ ಆಭರಣಗಳ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬಂದು ನಂತರ ಕುಸಿತ ಕಾಣಲಿದೆ. ದೇಶದ ಹಿತದೃಷ್ಟಿಯಿಂದ ನೋಡಿದಾಗ, ದೇಶ-ದೇಶಗಳ ನಡುವೆ ಮೋಸದ ಯುದ್ಧದ ಭೀತಿ ಕಾಡಲಿದೆ ಹಾಗೂ ದೇಶದ ಒಳಗಿನ ಒಬ್ಬ ಪ್ರಭಾವಿ ಮತ್ತು ಒಳ್ಳೆಯ ವ್ಯಕ್ತಿಗೆ ಮೋಸದಿಂದ ಸಾವಾಗುವ ಸಾಧ್ಯತೆ ಇದೆ ಎಂಬ ನುಡಿಗಳು ಭಕ್ತರಲ್ಲಿ ಆತಂಕ ಮತ್ತು ಕುತೂಹಲ ಎರಡನ್ನೂ ಮೂಡಿಸಿವೆ.

Tags:

error: Content is protected !!